ಬೆಂಗಳೂರು: 2021-22ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿ ಈ ವರ್ಷವೂ ಪುನಃ ಸಿಇಟಿ ಬರೆದಿರುವ 24 ಸಾವಿರ ವಿದ್ಯಾರ್ಥಿಗಳಿಗೆ ಪಿಯುಸಿ ಅಂಕಗಳನ್ನು ಪರಿಗಣಿಸುವುದು ಸಾಧ್ಯವಿಲ್ಲ. ಈ ವಿಷಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸ್ಪಷ್ಟಪಡಿಸಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ಜೊತೆ ವಿಕಾಸಸೌಧದಲ್ಲಿ ಮಂಗಳವಾರ ಸಂಜೆ ಸಭೆ ನಡೆಸಿದರು. ಬಳಿಕ ಸಚಿವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಈ 24,000 ವಿದ್ಯಾರ್ಥಿಗಳಿಗೆ ಈಗ ಪಿಯುಸಿ ಅಂಕಗಳನ್ನು ಪರಿಗಣಿಸಿ, ರ‍್ಯಾಂಕಿಂಗ್ ಕೊಟ್ಟರೆ ಒಟ್ಟು 3 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇವರಲ್ಲಿ ಒಂದುವರೆ ಲಕ್ಷ ವಿದ್ಯಾರ್ಥಿಗಳು ಹೋದ ವರ್ಷವೇ ಸಿಇಟಿ ಬರೆದಿರುವವರು ಹಾಗೂ ಈ ವರ್ಷದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಅವರು ವಿವರಿಸಿದರು.
ಇದಲ್ಲದೆ, ಕಳೆದ ವರ್ಷದ ಐಸಿಎಸ್ಇ ಪಠ್ಯಕ್ರಮದ 64 ಮತ್ತು ಸಿಬಿಎಸ್ಇ ಪಠ್ಯಕ್ರಮದ 600 ವಿದ್ಯಾರ್ಥಿಗಳು ಕೂಡ ಈ ಬಾರಿ ಸಿಇಟಿ ಬರೆದಿದ್ದಾರೆ. ಅವರನ್ನು ಕೂಡ ಕೇವಲ ಸಿಇಟಿ ಅಂಕದ ಮೇಲೆ ರ‍್ಯಾಂಕಿಂಗ್ ಕೊಡಲಾಗಿದೆ. ಈ ವಿಷಯದಲ್ಲಿ ಗೊಂದಲ ಬೇಡ. ಈ ವಿದ್ಯಾರ್ಥಿಗಳಿಗೆ ಯಾವ ರೀತಿ ಸಹಾಯ ಮಾಡಬಹುದು ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಇದನ್ನೂ ಓದಿ: ಮಹಿಳಾ ವಾಣಿಜ್ಯೋದ್ಯಮ ಪ್ರಗತಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರ: ಸಿಎಂ ಬೊಮ್ಮಾಯಿ
ಏನೇ ಮಾಡಿದ್ರೂ ಇತರ ದೊಡ್ಡ ಸಂಖ್ಯೆಯ ಹಾಗೂ ಎರಡೂ ಪರೀಕ್ಷೆಗಳನ್ನು ಬರೆದವರಿಗೆ ಅನ್ಯಾಯ ಆಗುತ್ತದೆ. ಅವರ ರ‍್ಯಾಂಕಿಂಗ್‌ನಲ್ಲಿ ಬಹಳ ವ್ಯತ್ಯಾಸ ಆಗುತ್ತದೆ. ಹೀಗಾಗಿ ಕೆಇಎ ತೆಗೆದುಕೊಂಡು ನಿಲುವುದು ಸರಿ ಇದೆ ಎನ್ನುವುದರ ತೀರ್ಮಾನಕ್ಕೆ ಬರಲಾಯಿತು. ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತರಲಾಗಿದೆ ಎಂದು ಸಚಿವರು ವಿವರಿಸಿದರು.
2021-22 ರಲ್ಲಿ ಕೋವಿಡ್ ಹಿನ್ನೆಲೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಆಗಿರಲಿಲ್ಲ. ಹೀಗಾಗಿ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ನೀಡಲಾಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು. ನನ್ನ ಪ್ರಕಾರ, ಈ 24 ಸಾವಿರ ವಿದ್ಯಾರ್ಥಿಗಳಿಗೂ ವಿವಿಧ ಕಾಲೇಜುಗಳಲ್ಲಿ ಸೀಟು ಸಿಗುತ್ತದೆ. ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಚಿವರು ಮನವಿ ಮಾಡಿದ್ದಾರೆ. ಇವರಿಗೆಲ್ಲ ಈಗಾಗಲೇ ಒಮ್ಮೆ ಅವಕಾಶ ನೀಡಲಾಗಿದೆ ಎಂಬುದನ್ನು ಸಚಿವರು ಸ್ಪಷ್ಟವಾಗಿ ತಿಳಿಸಿದರು.