ಬೆಂಗಳೂರು: ಕಬ್ಬು ಉಪ ಉತ್ಪನ್ನಗಳ ಲಾಭಾಂಶ ಹಂಚಿಕೆ ಸಂಬಂಧ ತಾಂತ್ರಿಕ ಪರಿಣಿತರ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಸದಸ್ಯರು, ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಥೆನಾಲ್ ಸೇರಿ ಕಬ್ಬಿನ ಉಪ ಉತ್ಪನ್ನಗಳಿಂದ ಕಾರ್ಖಾನೆಗಳಿಗೆ ಬರುವ ಆದಾಯ ಹಂಚುವ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲಾಗುವುದು.
10 ದಿನಗಳಲ್ಲಿ ವರದಿ ನೀಡಿ, ಸಿಎಂ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಸಿಎಂ ಕಬ್ಬು ಬೆಳೆಗಾರರಿಗೆ ಪೂರಕವಾದ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ ಎಂದರು. ಉಪ ಉತ್ಪನ್ನಗಳ ಲಾಭಾಂಶವನ್ನು ರೈತರಿಗೆ ನೀಡುವುದು ಸರ್ಕಾರದ ಆದ್ಯತೆಯಾಗಿದೆ. ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ ಆಯಕ್ತರ ನೇತೃತ್ವದಲ್ಲಿ ಐದು ಸದಸ್ಯರು ಸಮಿತಿಯಲ್ಲಿರಲಿದ್ದಾರೆ ಎಂದು ಸಚಿವರು ವಿವರಿಸಿದರು.
2020-21ನೇ ಸಾಲಿನಲ್ಲಿ ಶೇ 100ರಷ್ಟು ರೈತರ ಬಾಕಿ ಬಿಲ್ ಪಾವತಿ ಮಾಡಲಾಗಿದೆ. ಕಬ್ಬು ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಕಾಲ್ ಸೆಂಟರ್ ಆರಂಭಿಸಲಾಗಿದೆ. 72 ಕಾರ್ಖಾನೆಗಳ ಪೈಕಿ 5 ಕಾರ್ಖಾನೆಗಳು ಕ್ರಷಿಂಗ್ ಆರಂಭಿಸಿಲ್ಲ. ಸರ್ಕಾರ ಕಬ್ಬು ಬೆಳೆಗಾರರ ಪರವಾಗಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಕಬ್ಬು ಬೆಳೆಗಾರರ ಒತ್ತಾಯ ಏನು?: ರಾಜ್ಯದ ಕಬ್ಬು ಬೆಳೆಗಾರ ರೈತರು ಹಲವು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ 10 ದಿನಗಳಿಂದ ನಿರಂತರ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕಬ್ಬಿನ ಉತ್ಪಾದನಾ ವೆಚ್ಚ 20ರಷ್ಟು ಏರಿಕೆಯಾಗಿದೆ ರಸಗೊಬ್ಬರ, ಡೀಸೆಲ್ ಬೀಜ, ಕೂಲಿ ಸಾಗಾಣಿಕೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್ ಆರ್ ಪಿ ಬೆಲೆ, ಇಳುವರಿ ಆಧಾರ ಪರಿಗಣಿಸುವ ಕಾರಣ ರೈತರಿಗೆ ಕಳೆದ ವರ್ಷಕ್ಕಿಂತ ಪ್ರತಿ ಟನ್ಗೆ ಸರಾಸರಿ 50ರೂ ರಷ್ಟು ಕಡಿಮೆ ಹಣ ಸಿಗುತ್ತಿದೆ ಈ ಅನ್ಯಾಯ ಸರಿಪಡಿಸಬೇಕು ಎಂದು ವಿಕಾಸಸೌಧದಲ್ಲಿ ನಡೆದ ರಾಜ್ಯ ಸರ್ಕಾರದ ಕಬ್ಬು ಖರೀದಿ ನಿಯಂತ್ರಣ ಮಂಡಳಿ ಹಾಗೂ ರಾಜ್ಯದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ಕಬ್ಬಿನ ಎಫ್‌ಆರ್‌ಪಿ ದರ ಹೆಚ್ಚಿಸಬೇಕು. ಕನಿಷ್ಠ 3500 ಎಫ್‌ಆರ್‌ಪಿ ಕನಿಷ್ಠ ದರ ನಿಗದಿಯಾಗಬೇಕು ಅಥವಾ ರಾಜ್ಯ ಸಲಹಾ ಬೆಲೆ SAP ನಿಗದಿ ಮಾಡಬೇಕು. ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಕಳೆದ ವರ್ಷಕ್ಕಿಂತ 250 ರಿಂದ 300 ರೂಪಾಯಿ ಏರಿಕೆಯಾಗಿರುವ ಕಾರಣ ಕಬ್ಬಿನ ಉಪ ಉತ್ಪನ್ನಗಳ ಲಾಭ, ಎಥೆನಾಲ್ ಲಾಭ ಸೇರಿಸಿ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗದಿ ಮಾಡಬೇಕು.
ಕಬ್ಬಿನ ಕಟಾವು ವಿಳಂಬ ಮಾಡುವ ಕಾರ್ಖಾನೆಗಳು ಕಟಾವಿನ ವಿಳಂಬದ ಅವಧಿಗೆ, ನಾಲ್ಕೈದು ತಿಂಗಳ ಅವಧಿಗೆ, ಶೇಕಡ 15ರಷ್ಟು ಹೆಚ್ಚುವರಿ ಬಡ್ಡಿ ಸೇರಿಸಿ ಕೊಡಬೇಕು. ಇದರಿಂದ ರೈತರಿಗೆ ತೂಕದಲ್ಲಿ, ಇಳುವರಿಯಲ್ಲಿ, ಸಾಲದ ಬಡ್ಡಿ ಪಾವತಿಯಲ್ಲಿ ನಷ್ಟವಾಗುವುದು ತಪ್ಪುತ್ತದೆ ಎಂದರು.
ಕಟಾವು ಕೂಲಿಕಾರರು ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಸಂದರ್ಭದಲ್ಲಿ, ಆಯಾ ಕಾರ್ಖಾನೆಗಳನ್ನು ಜವಾಬ್ದಾರಿ ಮಾಡಿ ಕಾರ್ಖಾನೆಗಳಿಂದ ವಸೂಲಿ ಮಾಡಿ ವಾಪಸ್ ರೈತರಿಗೆ ಕೊಡಿಸಬೇಕು. ಉತ್ತರ ಪ್ರದೇಶದಲ್ಲಿ ಪ್ರತಿ ಟನ್ ಗೆ 3500, ಪಂಜಾಬ್ ರಾಜ್ಯದಲ್ಲಿ 3800 ನಿಗದಿ ಮಾಡಿದ್ದಾರೆ.
ಆಂಧ್ರಪ್ರದೇಶದಲ್ಲಿ 9.5 ಇಳುವರಿ ಬರುವ ಕಬ್ಬಿಗೆ ಎಫ್ ಆರ್ ಪಿ ದರಕ್ಕಿಂತ ಹೆಚ್ಚುವರಿಗಾಗಿ 300 ರೂ. ನಿಗದಿ ಮಾಡಿ ರೈತರಿಗೆ ಕೊಡಿಸುತ್ತಾರೆ. ಅದೇ ರೀತಿ ರಾಜ್ಯದಲ್ಲಿ ಹೆಚ್ಚು ಇಳುವರಿ ಇರುವ ಕಾರಣ ಕನಿಷ್ಠ 500 ರೂಪಾಯಿ ಹೆಚ್ಚುವರಿಯಾಗಿ ನಿಗದಿ ಮಾಡಬೇಕು ಎಂದರು.
ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಳೆದ 10 ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ನಿರ್ಧಾರ ಪ್ರಕಟಣೆಯಾಗಬೇಕು ಎಂದು ರಾಜ್ಯದ ಕಬ್ಬು ಬೆಳೆಗಾರರ ಪರವಾಗಿ ಒತ್ತಾಯಿಸಿದರು.
ಇದನ್ನೂ ಓದಿ: ಕಬ್ಬಿಗೆ ಏಕರೂಪದಲ್ಲಿ ಎಫ್‌ಆರ್‌ಪಿ ದರ ನಿಗದಿ ಸಾಧ್ಯವಿಲ್ಲ: ಸಕ್ಕರೆ ಸಚಿವ