ಬೆಂಗಳೂರು: ವಿಧಾನಸೌಧದಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ತೀರ್ಮಾನ ಕೈಗೊಳ್ಳಲಾಯಿತು. ಇದಕ್ಕೆ ಸ್ಪೀಕರ್ ಅವಕಾಶ ಕೊಡದಿರುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಬಿಜೆಪಿ ಸರ್ಕಾರದ ವಿರುದ್ಧ ಎಲ್ಲ ಶಾಸಕರೂ ಧ್ವನಿ ಎತ್ತುವಂತೆ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ಮಾಜಿ ಸಚಿವರಾದ ಎಚ್ ಕೆ ಪಾಟೀಲ್, ಈಶ್ವರ್ ಖಂಡ್ರೆ, ಯು ಟಿ ಖಾದರ್, ತನ್ವೀರ್ ಸೇಠ್ ಸೇರಿ ಪ್ರಮುಖ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಿದ್ದರು. ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸಭೆ ನಡೆಯಿತು.
ರಾಜ್ಯಪಾಲರ ಭಾಷಣದ ಬಗ್ಗೆ ಸಭೆಯಲ್ಲಿ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಹೊಸ ವಿಚಾರಗಳ ಪ್ರಸ್ತಾಪ ಇರಲಿಲ್ಲ. ನಮ್ಮ ಸರ್ಕಾರದ ಅವಧಿಯ ಯೋಜನೆಗಳನ್ನೇ ಬಹುತೇಕ ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ರಾಜ್ಯಪಾಲರ ಭಾಷಣದ ಚರ್ಚೆ ವೇಳೆ ಎಚ್ಚರಿಕೆಯಿಂದ ಮಾತನಾಡೋಣ. ಭಾಷಣದ ಅಂಶಗಳನ್ನು ವಿರೋಧಿಸಿದರೆ ಸಮ್ಮಿಶ್ರ ಸರ್ಕಾರದ ಯೋಜನೆಗಳನ್ನೇ ಟೀಕಿಸಿದಂತಾಗುತ್ತದೆ ಎಂಬ ವಿಚಾರವನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ.
ಇದರಿಂದಾಗಿ ನಾವು ಬಿಜೆಪಿ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೊಳಿಸಿಲ್ಲ ಅನ್ನುವ ಅಂಶ ಪ್ರಸ್ತಾಪಿಸೋಣ. ಪ್ರತಿ ಹಂತದಲ್ಲಿಯೂ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವ ಪ್ರಯತ್ನ ಮಾಡೋಣ ಎಂದು ಸೂಚಿಸಿದ್ದಾರೆ.