ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ಹೆಲ್ಪ್ ಎಜುಕೇಟ್ ಉಪಕ್ರಮದ ಅಡಿಯಲ್ಲಿ ವಿವಿಧ ಕಾಲೇಜುಗಳಿಗೆ ಡಿಬಾಂಡೆಡ್ ಕಂಪ್ಯೂಟರ್‌ಗಳನ್ನು ಇಲಾಖೆಯ ಉನ್ನತ ಅಧಿಕಾರಿಗಳು ಕಳಿಸಿಕೊಟ್ಟರು.
ನಗರದ ಶೇಷಾದ್ರಿ ರಸ್ತೆಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯ ಕಚೇರಿ ಮುಂಭಾಗದಲ್ಲಿ ಕಂಪ್ಯೂಟರ್‌ಗಳನ್ನು ಹೊತ್ತು ಹೊರಟ ವಾಹನಗಳಿಗೆ ಇಲಾಖೆಯ ಆಯುಕ್ತ ಪ್ರದೀಪ್ ಹಸಿರು ನಿಶಾನೆ ತೋರಿದರು.
ಕಾಗ್ನಿಜೆಂಟ್ ಸಂಸ್ಥೆ ನೀಡಿರುವ ಡಿಬಾಂಡೆಡ್ ಕಂಪ್ಯೂಟರ್‌ಗಳನ್ನು ವಿವಿಧ ಕಾಲೇಜುಗಳಿಗೆ ರವಾನೆ ಮಾಡಲಾಗಿದೆ. ವಿವಿಧ ಹಂತಗಳಲ್ಲಿ ಒಟ್ಟು 12,500 ಡಿಬಾಂಡೆಡ್ ಕಂಪ್ಯೂಟರ್‌ಗಳನ್ನು ಕಳಿಸಲಾಗುತ್ತಿದೆ. ರವಾನಿಸಲ್ಪಟ್ಟ ಕಂಪ್ಯೂಟರ್‌ಗಳನ್ನು ಬೆಂಗಳೂರು ವಲಯದ ಕಾಲೇಜುಗಳಿಗೆ ವಿತರಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಮಾಹಿತಿ ನೀಡಿದರು.
ಸಂಸ್ಥೆ ಡಿಬಾಂಡೆಡ್ 12,500 ಕಂಪ್ಯೂಟರ್‌ಗಳನ್ನು ಕಾಲೇಜು ಶಿಕ್ಷಣ ಇಲಾಖೆಗೆ ನೀಡಿದ್ದಾರೆ. ಇದಕ್ಕೆ ಅಗತ್ಯವಾದ ಸಾಫ್ಟ್ವೇರ್ ರೋಟರಿ ಕ್ಲಬ್ ಅಪ್ಡೇಟ್ ಮಾಡಿಕೊಡುತ್ತಿದೆ. ಈ ಕಂಪ್ಯೂಟರ್‌ಗಳನ್ನು ಸರ್ಕಾರಿ ಪದವಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ: ನಿವೃತ್ತ ಸಿಬ್ಬಂದಿಯನ್ನು ನೇಮಿಸಲು ನಿರ್ಧಾರ; ಕೆಲಸ ಬಹಿಷ್ಕರಿಸಿದ ನೌಕರರಿಗೆ ಶಾಕ್
ಎಲ್ಲಾ ಸರ್ಕಾರಿ ಪದವಿ, ಇಂಜಿನಿಯರಿಂಗ್, ತಾಂತ್ರಿಕ ಕಾಲೇಜುಗಳಿಗೆ ಒಟ್ಟು 30,000 ಕಂಪ್ಯೂಟರ್ಗಳು ಬೇಕು. ಈಗ ಕಾಗ್ನಿಜೆಂಟ್ ಕಂಪನಿ 12,500 ಕಂಪ್ಯೂಟರ್‌ಗಳನ್ನು ನೀಡುತ್ತಿದೆ. ಮತ್ತೆ 8,000 ಕಂಪ್ಯೂಟರ್‌ಗಳನ್ನು ಕೊಡುವುದಾಗಿ ತಿಳಿಸಿದೆ. ಉಳಿದ 10,000 ಕಂಪ್ಯೂಟರ್‌ಗಳನ್ನು ಬೇರೆ ಬೇರೆ ಕಂಪನಿಗಳಿಂದ ಪಡೆಯುವ ಕೆಲಸ ಮಾಡಲಾಗುವುದು ಎಂದರು.
ಈ ವೇಳೆ ರೋಟರಿ ಕ್ಲಬ್ ಮುಖ್ಯಸ್ಥ ನಾಗೇಂದ್ರ ಪ್ರಸಾದ್, ಕಾಗ್ನಿಜೆಂಟ್ ಸಂಸ್ಥೆಯ ಸೆಲ್ವಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.