ಬೆಂಗಳೂರು: ರಾಜ್ಯದ ಆನೆ ಬಿಡಾರಗಳಲ್ಲಿ ಸಂಭವಿಸುತ್ತಿರುವ ಆನೆಗಳ ಮರಣ ತಡೆಗಟ್ಟಲು ಪೂರಕವಾಗಿ ಒಂದು ತಿಂಗಳಲ್ಲಿ ಎಲ್ಲಾ ಬಿಡಾರಗಳಿಗೆ ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಆನೆ ಬಿಡಾರದಲ್ಲಿ ಆನೆಗಳ ಸಾವು ಪ್ರಕರಣ ಸಂಬಂಧ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರು ಆಗಿರುವ ಎನ್.ಪಿ.ಅಮೃತೇಶ್ ವಾದ ಮಂಡಿಸಿ ಮೈಸೂರು, ಮಡಿಕೇರಿ, ಶಿವಮೊಗ್ಗ ಸೇರಿ ರಾಜ್ಯದ ಆನೆ ಶಿಬಿರಗಳಲ್ಲಿ ಆಹಾರ, ನೀರು ಮತ್ತು ಔಷಧ ವ್ಯವಸ್ಥೆ ಇಲ್ಲದೆ ಆನೆಗಳು ಸಾವನ್ನಪ್ಪುತ್ತಿವೆ. ಅದರಲ್ಲೂ ಇತ್ತಿಚೆಗೆ ರೌಡಿ ರಂಗ ಸೇರಿ ಒಟ್ಟು 11 ಆನೆಗಳು ಆರೋಗ್ಯ ಸಮಸ್ಯೆ ಸೇರಿ ಇನ್ನಿತರ ಕಾರಣಗಳಿಂದಾಗಿ ಸಾವನ್ನಪ್ಪಿವೆ. ಈ ಆನೆಗಳ ಸಾವುಗಳ ಬಗ್ಗೆ ನಿಖರವಾದ ಕಾರಣ ತಿಳಿಯಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಬೇಕೆಂದು ನ್ಯಾಯಲಯಕ್ಕೆ ಮನವಿ ಮಾಡಿದರು.
ಪ್ರತಿವಾದ ಮಂಡಿಸಿದ ಸರ್ಕಾರಿ ಪರ ವಕೀಲರು, ಒಂದು ತಿಂಗಳಲ್ಲಿ ಆನೆಗಳ ಆರೋಗ್ಯ ತಪಾಸಣೆ ನಡೆಸಲು ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ತಿಳಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಸರ್ಕಾರಿ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡು ವಿಚಾರಣೆಯನ್ನು ಮುಂದೂಡಿಕೆ ಮಾಡಿತು.