ಬೆಂಗಳೂರು: 4 ತಿಂಗಳಿಂದ ಬಾಡಿಗೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಬಾಡಿಗೆದಾರರ ಮೇಲೆ ಮನೆಯೊಡತಿ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ.
ಮಹಾಲಕ್ಷ್ಮೀ ಬಂಧಿತ ಆರೋಪಿ. ಪೂರ್ಣಿಮಾ ಎಂಬ ಬಾಡಿಗೆಯಾಕೆ ಹಲ್ಲೆಗೊಳಗಾಗಿರುವ ಮಹಿಳೆ. ಈಕೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ರಾಜಗೋಪಾಲ ನಗರದ ಲಗ್ಗೆರೆಯಲ್ಲಿ ವಾಸವಾಗಿದ್ದ ಮಹಾಲಕ್ಷ್ಮೀ, ಪೂರ್ಣಿಮಾ ಎಂಬುವರಿಗೆ ಮನೆ ಬಾಡಿಗೆಗೆ ಕೊಟ್ಟಿದ್ದಳು. ನಾಲ್ಕು ತಿಂಗಳಿಂದ ಬಾಡಿಗೆ ಹಣ ನೀಡಿರಲಿಲ್ಲ ಎಂಬ ಕಾರಣದಿಂದ ಅಸಮಾಧಾನಗೊಂಡಿದ್ದ ಮನೆ ಒಡತಿ, ಮನೆ ಹತ್ತಿರ ಬಂದು ಕ್ಯಾತೆ ತೆಗೆದು ಮನೆ ಖಾಲಿ ಮಾಡುವಂತೆ ತಾಕೀತು ಮಾಡಿದ್ದಾಳೆ. ಇದಕ್ಕೆ ಪೂರ್ಣಿಮಾ ಪ್ರತಿಕ್ರಿಯಿಸಿ ಕೊಟ್ಟಿರುವ ಅಡ್ವಾನ್ಸ್ ಹಣದಲ್ಲಿ ಕಡಿತ ಮಾಡಿಕೊಳ್ಳಿ ಎಂದು ಹೇಳಿದ್ದಾಳೆ. ಇದರಿಂದ ಮಹಾಲಕ್ಷ್ಮೀ ಮತ್ತಷ್ಟು ಕೆರಳಿದ್ದಾಳೆ.
ಇಬ್ಬರ ನಡುವೆ ಮಾತಿನ ಸಮರವೇ ನಡೆದಿದೆ. ಬಳಿಕ ಮನೆಗೆ ನುಗ್ಗಿದ ಒಡತಿ ಪೂರ್ಣಿಮಾಳನ್ನು ಚಾಕುವಿನಿಂದ ಮನಬಂದಂತೆ ಚುಚ್ಚಿ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ. ರಕ್ತದ ಮಡುವಿನಲ್ಲೇ ಮನೆಯೊಳಗೆ ಒದ್ದಾಡುತ್ತಿದ್ದ ಪೂರ್ಣಿಮಾಳನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ರಾಜಗೋಪಾಲ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮನೆ ಒಡತಿ ಮಹಾಲಕ್ಷ್ಮೀಯನ್ನು ಬಂಧಿಸಿದ್ದಾರೆ.