ಬೆಂಗಳೂರು: ಸಂಚಾರ ವಿಭಾಗದ ಡಿಸಿಪಿ ಸೌಮ್ಯಲತಾ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಹಾಗೆಯೇ ಅಮಾನತು ಅವಧಿಯಲ್ಲಿ ಖಾಸಗಿ ನೌಕರಿ ಭತ್ಯೆ ಹಾಗೂ ವ್ಯವಹಾರ ಮಾಡಿದರೆ ಜೀವನ ಭತ್ಯೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
![DCP suspended police staff who did not wear mask](https://etvbharatimages.akamaized.net/etvbharat/prod-images/kn-bng-02-trffic-7204498_22082020083238_2208f_1598065358_636.jpg)
![DCP suspended police staff who did not wear mask](https://etvbharatimages.akamaized.net/etvbharat/prod-images/kn-bng-02-trffic-7204498_22082020083238_2208f_1598065358_272.jpg)
ಜಾಲಹಳ್ಳಿ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಆಗಸ್ಟ್ 11ರಂದು ಆರು ಸಿಬ್ಬಂದಿಯನ್ನು ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿ ಕೋಬ್ರಾ ಡ್ಯೂಟಿಗೆ ಹಾಗೂ ಜಾಲಹಳ್ಳಿ ಜಂಕ್ಷನ್, ಗಂಗಮ್ಮನ ವೃತ್ತ, ಸಾಹಿತ್ಯ ಕೂಟ ಜಂಕ್ಷನ್ ಸೇರಿದಂತೆ ಹಲವೆಡೆ ಸಂಚಾರ ನಿರ್ವಹಣೆಯ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದರು. ಹಾಗೆಯೇ ಕೊರೊನಾ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ಆ ಸಿಬ್ಬಂದಿಗೆ ಸೂಚಿಸಲಾಗಿತ್ತು.
ಆದರೆ ಹಿರಿಯ ಅಧಿಕಾರಿಗಳ ಸಲಹೆ ಲೆಕ್ಕಿಸದೆ ಜಾಲಹಳ್ಳಿ ಸಂಚಾರ ಠಾಣೆಯ ಎಎಸ್‌ಐ ಮಂಜುನಾಥಯ್ಯ, ಹೆಡ್ ಕಾನ್ಸ್ಟೇಬಲ್ ನಾಗರಾಜು, ಕಾನ್ಸ್ಟೇಬಲ್ಗಳಾದ ಪದ್ಮನಾಭ್, ಮಧುಸೂದನ್, ವಿಶ್ವನಾಥ್ ಹಾಗೂ ಮಹಿಳಾ ಕಾನ್ಸ್ಟೇಬಲ್ ಸುಜತಾ ಸಾಹಿತ್ಯ ಕೂಟ ಬಳಿಯ ಪಾರ್ಕ್‌ನಲ್ಲಿ ಮಾಸ್ಕ್ ಧರಿಸದೆ ಹಾಗೆಯೇ ವ್ಯಕ್ತಿಗತ ಅಂತರ ಕಾಯ್ದುಕೊಳ್ಳದೆ ಕರ್ತವ್ಯ ಬಿಟ್ಟು ಪಾರ್ಕ್‌ನಲ್ಲಿ ಗುಂಪು ಸೇರಿದ್ದರಂತೆ. ಈ ವಿಚಾರ ಡಿಸಿಪಿಗೆ ತಿಳಿದು ಕರ್ತವ್ಯದ ವೇಳೆ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತೋರಿದ ಆರೋಪದ ಮೇಲೆ ಅಮಾನತು ಮಾಡಿದ್ದಾರೆ.