ಬೆಂಗಳೂರು: ಖಾಲಿ ಹೊಟ್ಟೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ 130 ಕಿ.ಮೀ.ನಡೆದುಕೊಂಡೇ ಬಂದ 15 ಜನ ಕಾರ್ಮಿಕರಿಗೆ ಕೇಂದ್ರ ವಲಯ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಊಟದ ವ್ಯವಸ್ಥೆ ಮಾಡಿದ್ದಾರೆ.
ಜಾರ್ಖಂಡ್ ಮೂಲದ ಕಾರ್ಮಿಕರು ಮೈಸೂರಿನಲ್ಲಿ ಗಾರೆ ಕೆಲಸ ಮಾಡ್ತಿದ್ರು. ಲಾಕ್ಡೌನ್ ಘೋಷಣೆಯಾದ ಬಳಿಕ ಓನರ್ ಸಂಪರ್ಕಕ್ಕೆ ಸಿಕ್ಕಿಲ್ಲ. ಊಟ, ವಸತಿಗೂ ಕಷ್ಟವಾಗಿದೆ. ಸದ್ಯ ಬೆಂಗಳೂರಿನಿಂದ ರೈಲು ಬಿಟ್ಟ ಹಿನ್ನೆಲೆ ಕಾರ್ಮಿಕರು ತಮ್ಮ ಊರು ತಲುಪಲು ಮೈಸೂರಿನಿಂದ ಬೆಂಗಳೂರಿಗೆ ಕಾಲ್ನಡಿಗೆಯಲ್ಲಿ ಊಟ ತಿಂಡಿ ಇಲ್ಲದೇ ಎರಡು ದಿನಗಳಿಂದ ಒಂದೊಂದು ಬಿಸ್ಕತ್ ಮಾತ್ರ ತಿಂದು ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಡಿಸಿಪಿ ಕಚೇರಿಗೆ ಬಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಊರುಗಳಿಗೆ ತೆರಳಲು ಯಾವುದೇ ರಿಜಿಸ್ಟರ್ ಮಾಡ್ಕೊಂಡಿಲ್ಲ. ಅದು ಹೇಗೆ ಮಾಡೋದು ಅಂತಾ ನಮಗೆ ಕೂಡ ಗೊತ್ತಿಲ್ಲ. ಹೇಗಾದರೂ ಮಾಡಿ ನಮ್ಮ ಊರಿಗೆ ಕಳುಹಿಸಿ ಕೊಡಿ ಅಂತಾ ಮನವಿ ಮಾಡಿದ್ದಾರೆ. ಕಾರ್ಮಿಕರ ಕಷ್ಟ ಆಲಿಸಿದ ಕೇಂದ್ರ ವಲಯ ಡಿಸಿಪಿ ಚೇತನ್ ಸಿಂಗ್ ರಾಥೋಡ್ ತಾವೇ ಮುಂದೆ ನಿಂತು, ಅವ್ರಿಗೆ ಊಟ ಕೊಡಿಸಿ, ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಡಿಸಿಪಿಯವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.