ಬೆಂಗಳೂರು : ಮೊರಾರ್ಜಿ ದೇಸಾಯಿ ವಸತಿ ಕಾಲೇಜುಗಳ ಪಿಯುಸಿ ಫಲಿತಾಂಶವು ಕಳೆದ ವರ್ಷಕ್ಕಿಂತ ಶೇ.10ರಷ್ಟು ಹೆಚ್ಚಳವಾಗಿದೆ. ವಸತಿ ಕಾಲೇಜುಗಳ ಪ್ರವೇಶಕ್ಕೆ ಕೇಂದ್ರೀಕೃತ ಆನ್‌ಲೈನ್ ಅರ್ಜಿ ಆಹ್ವಾನಿಸಲು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಸೂಚಿಸಿದ್ದಾರೆ.
ಕೊರೊನಾ ಸೋಂಕಿನ ನಡೆವೆಯೂ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವು ಅತ್ಯುತ್ತಮವಾಗಿ ಬಂದಿದ್ದು, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 66 ಮೊರಾರ್ಜಿ ದೇಸಾಯಿ ವಸತಿ ಕಾಲೇಜುಗಳ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ತೇರ್ಗಡೆಯಾಗಿದ್ದಾರೆ. ಶೇ.86.4ರಷ್ಟು ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರಲ್ಲಿ ಶೇ.75.3ರಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ಪ್ರಥಮ ಶ್ರೇಣಿ ಉತ್ತೀರ್ಣರಾಗಿದ್ದಾರೆ. 422 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. 1809 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಗಣಿತ ಮತ್ತಿತರ ಪ್ರಮುಖ ವಿಷಯಗಳಲ್ಲಿ 72 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ. 11 ಕಾಲೇಜುಗಳಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ.76.4ರಷ್ಟು ಫಲಿತಾಂಶ ಬಂದಿತ್ತು. ವಸತಿ ಕಾಲೇಜುಗಳ ಫಲಿತಾಂಶವು ರಾಜ್ಯದ ಒಟ್ಟಾರೆ ಪಿಯುಸಿ ಫಲಿತಾಂಶಕ್ಕಿಂತ ಶೇ.25ರಷ್ಟು ಹೆಚ್ಚಳವಾಗಿದೆ. ಪ್ರಥಮ ಪಿಯುಸಿ ಆರಂಭದಿಂದಲೇ ಸಿಇಟಿ/ನೀಟ್/ಜೆಇಇ ಮತ್ತಿತರ ಪರೀಕ್ಷೆಗಳಿಗೆ ಡಿಜಿಟಲ್ ಆಧಾರಿತ ತರಬೇತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಸತಿ ಶಾಲೆಗಳ ವಿದ್ಯಾರ್ಥಿಗಳು ವಸತಿ ಕಾಲೇಜುಗಳಲ್ಲಿ ತಮ್ಮ ವ್ಯಾಸಾಂಗ ಮುಂದುವರೆಸಿ, ಕೀರ್ತಿ ತರಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಡಿಸಿಎಂ ತಿಳಿಸಿದ್ದಾರೆ.