ಬೆಂಗಳೂರು : ರಾಜ್ಯ ಸರ್ಕಾರದ ಒಂದು ವರ್ಷದ ಸಂಭ್ರಮಾಚರಣೆ ವೇಳೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ದೆಹಲಿ ಪ್ರವಾಸ ಈಗ ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲವನ್ನು ಸೃಷ್ಠಿಸಿದೆ. ನಾಯಕತ್ವ ಬದಲಾವಣೆ ಹಾಗೂ ಪರ್ಯಾಯ ನಾಯಕತ್ವದಂತಹ ಚರ್ಚೆ ಹುಟ್ಟು ಹಾಕಿದೆ.
ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಆರಂಭಗೊಂಡಿದೆ. ಕೇಂದ್ರದ ನಾಯಕರು ನಾಯಕತ್ವ ಬದಲಾವಣೆ ಚಿಂತನೆ ನಡೆಸಿದ್ದಾರೆ ಎನ್ನುವ ಮಾತುಗಳು ಇದೀಗ ಪಕ್ಷದ ವಲಯದಲ್ಲೇ ಹರಿದಾಡುತ್ತಿವೆ. ಇದಕ್ಕೆ ಡಿಸಿಎಂ ಲಕ್ಷ್ಮಣ ಸವದಿ ದೆಹಲಿ ಪ್ರವಾಸ ಪುಷ್ಠಿ ನೀಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿ, ವಿಧಾನಸೌಧದಲ್ಲಿ ಸರಳ ವರ್ಚುವಲ್ ಸಮಾರಂಭ ನಡೆಸಿತು. ಜಿಲ್ಲಾ ಉಸ್ತುವಾರಿಗಳು ಆಯಾ ಜಿಲ್ಲೆಯಲ್ಲಿ ಸಮಾರಂಭದ ನೇತೃತ್ವ ವಹಿಸಬೇಕು ಎನ್ನುವ ಸೂಚನೆ ನೀಡಲಾಗಿತ್ತು. ಆದರೂ ಡಿಸಿಎಂ ಲಕ್ಷ್ಮಣ ಸವದಿ ಕಾರ್ಯಕ್ರಮ ಬಿಟ್ಟು, ಪೂರ್ವನಿಗದಿ ಕಾರ್ಯಕ್ರಮದ ನೆಪದಲ್ಲಿ ದೆಹಲಿಗೆ ತೆರಳಿದ್ದಾರೆ. ಒಂದು ದಿನದ ಕಾರ್ಯಕ್ರಮಕ್ಕೆ ಮೂರು ದಿನ ದೆಹಲಿಯಲ್ಲೇ ಬೀಡು ಬಿಟ್ಟಿದ್ದು, ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಭೇಟಿ ಮಾಡಿರುವುದು, ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಂತಹ ಚಿಂತನೆಗಳು ಹುಟ್ಟಿಕೊಳ್ಳುವಂತೆ ಮಾಡಿದೆ. ಈಗಾಗಲೇ ಬಿಜೆಪಿ ಹೈಕಮಾಂಡ್ ನಿಯಮದಂತೆ 75 ವರ್ಷ ತುಂಬಿದವರು ಅಧಿಕಾರದಲ್ಲಿ ಇರುವಂತಿಲ್ಲ. ಗುಜರಾತ್ ಸಿಎಂ ಆಗಿದ್ದ ಆನಂದಿ ಬೆನ್ ರಾಜೀನಾಮೆ ಪಡೆದ ನಿದರ್ಶನ ಕಣ್ಣ ಮುಂದೆಯೇ ಇದೆ.
ಆದರೆ, ಈ ನಿಯಮ ಕರ್ನಾಟಕದ ಪಾಲಿಗೆ ಮಾತ್ರ ಅನ್ವಯವಾಗಿಲ್ಲ, ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡುವಾಗಲೇ 75 ವರ್ಷ ದಾಟಿಯಾಗಿತ್ತು. ಇದೀಗ ಒಂದು ವರ್ಷವನ್ನು ಪೂರ್ಣಗೊಳಿಸಲಾಗಿದೆ. ಹಾಗಾಗಿ ಯಡಿಯೂರಪ್ಪ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗುತ್ತದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಯಡಿಯೂರಪ್ಪ ನಂತರ ಯಾರು ಎನ್ನುವ ಪ್ರಶ್ನೆ ಎದ್ದಾಗಲೆಲ್ಲಾ ಈಗಾಗಲೇ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ಹೆಸರು ಕೇಳಿ ಬರುತ್ತಿತ್ತು. ಆದರೆ, ಶೆಟ್ಟರ್ ನಾಯಕತ್ವ ವಹಿಸಿಕೊಳ್ಳುವ ಪ್ರಯತ್ನದಿಂದ ಬಲು ದೂರ ತಟಸ್ಥವಾಗಿ ಉಳಿದಿದ್ದಾರೆ.
ಲಿಂಗಾಯತ ಸಮುದಾಯದವರೇ ಆದ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕೇಂದ್ರ ಸಚಿವ ಸುರೇಶ್ ಅಂಗಡಿ, ಯಡಿಯೂರಪ್ಪ ನಂತರದ ನಾಯಕತ್ವ ವಹಿಸಿಕೊಳ್ಳುವ ರೇಸ್ನಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿಯೇ ಡಿಸಿಎಂ ಸವದಿ ದೆಹಲಿ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಸವದಿಯನ್ನು ಡಿಸಿಎಂ ಮಾಡುವ ಮೂಲಕ ಭವಿಷ್ಯದ ನಾಯಕರನ್ನಾಗಿ ರೂಪಿಸುವ ಪ್ರಯತ್ನ ಹೈಕಮಾಂಡ್ನಿಂದ ನಡೆದಿದೆ ಎನ್ನುವ ಮಾತುಗಳು ಅಂದೇ ಕೇಳಿ ಬಂದಿದ್ದವು. ಇದೀಗ ಮೂರು ದಿನಗಳ ಕಾಲ ದೆಹಲಿಯಲ್ಲಿ ಬೀಡು ಬಿಟ್ಟು ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಗಮನ ಸೆಳೆದಿದ್ದಾರೆ.
ಮೂಲಗಳ ಪ್ರಕಾರ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಂತಹ ಪ್ರಯತ್ನ ಸದ್ಯಕ್ಕೆ ಆರಂಭಗೊಳ್ಳದಿದ್ರೂ, ಶಾಸಕರ ವಿಶ್ವಾಸ ಗಳಿಸಿಕೊಳ್ಳುವಂತೆ ಡಿಸಿಎಂ ಸವದಿಗೆ ಹೈಕಮಾಂಡ್ ನಾಯಕರು ಟಿಪ್ಸ್ ಕೊಟ್ಟಿದ್ದಾರೆ. ನಾಳೆ ದೆಹಲಿಯಿಂದ ವಾಪಸ್ಸಾಗುತ್ತಿರುವ ಸವದಿ, ಎರಡು ಮೂರು ದಿನಗಳ ನಂತರ ಶಾಸಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ. ವಿಶ್ವಾಸ ಗಳಿಸಿಕೊಳ್ಳುವ ಯತ್ನ ಮಾಡಲಿದ್ದಾರೆ ಎನ್ನಲಾಗಿದೆ.
ಆದರೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಂತಹ ಪ್ರಕ್ರಿಯೆಯನ್ನು ರಾಜ್ಯ ಬಿಜೆಪಿ ನಾಯಕರು ತಳ್ಳಿಹಾಕಿದ್ದಾರೆ. ಅಧಿಕೃತ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಘಟನೆಗಳೇ ಇಲ್ಲದಿರುವಾಗ ಅನಗತ್ಯವಾಗಿ ಪ್ರತಿಕ್ರಿಯೆ ನೀಡಿ ಗೊಂದಲ ಸೃಷ್ಠಿ ಬೇಡ ಎಂದು ಇಡೀ ವಿದ್ಯಮಾನವನ್ನು ಅಲ್ಲಗಳೆದಿದ್ದಾರೆ. ಇನ್ನು, ಸಿಎಂ ಕಚೇರಿ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿಎಂ ಯಡಿಯೂರಪ್ಪ ಎಂದಿನಂತೆ ತಮ್ಮ ಕಾರ್ಯದಲ್ಲಿ ತೊಡಗಿದ್ದಾರೆ. ಪೂರ್ವ ನಿಗದಿತ ಸಮಾರಂಭದಲ್ಲಿ ಭಾಗಿ, ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ವಯಸ್ಸಿನ ಮಿತಿ ಬಿಟ್ಟರೆ ಇನ್ಯಾವ ಕಾರಣವೂ ಇಲ್ಲ, ಇಳಿ ವಯಸ್ಸಿನಲ್ಲೂ ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ವಿಶ್ರಾಂತಿ ಇಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಆಗಿ ಯಡಿಯೂರಪ್ಪ ಅವರ ಕಾರ್ಯ ವೈಖರಿ ಹೈಕಮಾಂಡ್ ನಾಯಕರನ್ನೂ ಮೆಚ್ಚುವಂತೆ ಮಾಡಿದೆ. ಈ ಹಿನ್ನೆಲೆ ನಾಯಕತ್ವ ಬದಲಾವಣೆ ಚರ್ಚೆ ಸಾಕಷ್ಟು ಅನುಮಾನ ಹುಟ್ಟಿಸಿದೆ.
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಸ್ಥಾನಕ್ಕೆ ಉತ್ತರಾಧಿಕಾರಿಯ ಚರ್ಚೆ ಆರಂಭಗೊಂಡಿರುವುದಂತೂ ಸತ್ಯ. ಆದರೆ, ಯಾರು ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎನ್ನುವುದಕ್ಕೆ ಸದ್ಯಕ್ಕಂತೂ ಉತ್ತರವಿಲ್ಲ.