ಬೆಂಗಳೂರು: ಕೊರೊನಾ ಹರಡುವಿಕೆ ಹಿನ್ನೆಲೆ ಮೇ 3 ರ ವರೆಗೆ ದೇಶಾದ್ಯಂತ ಲಾಕ್ಡೌನ್ಗೆ ಕರೆ ನೀಡಲಾಗಿತ್ತು. ಇದೀಗ ಲಾಕ್ಡೌನ್ ಮುಗಿಯುವ ಹಂತಕ್ಕೆ ತಲುಪಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಯಾವ ರೀತಿ ಸಾರಿಗೆ ಸಂಪರ್ಕ ಕಲ್ಪಿಸಬೇಕೆಂಬುದರ ಬಗ್ಗೆ ಇಂದು ಸಭೆ ನಡೆಯಿತು.
ನಗರದ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ, ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಂದ ವಿಡಿಯೋ ಕಾನ್ಫರೆನ್ಸ್ ನಡೆಸಲಾಯಿತು. ಈ ವೇಳೆ ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ, ನಿರ್ದೇಶಕಿ ಶಿಖಾ ಹಾಗೂ ಕೆಎಸ್ಆರ್ಟಿಸಿಯ ನಿರ್ದೇಶಕ ಶಿವಯೋಗಿ ಕಳಸದ, ನಾಲ್ಕು ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರುಗಳು ಹಾಗೂ 41 ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ ಕಾನ್ಫರೆನ್ಸ್ ನಡೆಸಿದರು. ಮೇ 3ಕ್ಕೆ ಲಾಕ್ಡೌನ್ ಕೊನೆಗೊಳ್ಳಲಿದ್ದು, ಬಳಿಕ ಸಾರಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಚರ್ಚಿಸಲಾಯಿತು. ಗ್ರೀನ್ ಝೋನ್ಗಳಿಗೆ ಬಸ್ ಸಂಪರ್ಕ ಕಲ್ಪಿಸುವ ಕುರಿತು ಮತ್ತು ರೆಡ್ ಝೋನ್ಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಇನ್ನು ಇದೇ ವೇಳೆ, ಕಾರ್ಮಿಕ ದಿನಾಚರಣೆ ಪ್ರಯುಕ್ತ, ನಾಲ್ಕು ಸಾರಿಗೆ ನಿಗಮಗಳಲ್ಲಿ ಪ್ರತಿ ತಿಂಗಳು ಒಬ್ಬ ಚಾಲಕರಿಗೆ ಅತೀ ಹೆಚ್ಚು ಇಂಧನ ಕ್ಷಮತೆ ತೋರುವವರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವೈಯಕ್ತಿಕವಾಗಿ 10 ಗ್ರಾಂ ಬಂಗಾರದ ಪದಕ ನೀಡುವುದಾಗಿ ಘೋಷಣೆ ಮಾಡಿದರು.
ಸಾರಿಗೆ ಸಂಸ್ಥೆಗಳು ಇಂದು ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ನಾವೆಲ್ಲರೂ ಮುಂದಿನ ದಿನಗಳಲ್ಲಿ ತಂಡವಾಗಿ ಕರ್ತವ್ಯ ನಿರ್ವಹಿಸಿ, ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗಿರಬೇಕು ಹಾಗೂ ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ತಿಳಿಸಿದರು. ಪ್ರತಿಯೊಬ್ಬ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಸಂಪರ್ಕಿಸಿ, ಹಸಿರು, ಕೆಂಪು ವಲಯಗಳಲ್ಲಿ ಯಾವ ರೀತಿ ಬಸ್ ಕಾರ್ಯಾಚರಣೆ ಮಾಡಬೇಕು ಎಂಬುದರ ಬಗ್ಗೆ ಪರಾಮರ್ಶೆ ನಡೆಸಿದರು.
ಮುಂದಿನ ದಿನಗಳಲ್ಲಿ ಬಸ್ ಕಾರ್ಯಾಚರಣೆ ವ್ಯವಸ್ಥೆ ಹೇಗಿರಬೇಕು, ಸಾಮಾಜಿಕ ಅಂತರ ಕಾಪಾಡುವುದು, ಕಾರ್ಮಿಕರನ್ನು ಸ್ಥಳಾಂತರಿಸುವಾಗ ಹೆಚ್ಚಿನ ಕಾಳಜಿ ವಹಿಸುವುದು, ಬಸ್ ನಿಲ್ದಾಣಗಳನ್ನು ಸ್ಯಾನಿಟೈಸರ್ ಮಾಡುವುದು, ಸಿಬ್ಬಂದಿ ಮಾಸ್ಕ್ ಕಡ್ಡಾಯ ಧರಿಸುವಂತೆ ತಿಳಿಸಿದರು.
ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಾರಿಗೆ ಸಂಸ್ಥೆಗಳು ಕಾಮಿಕರ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ನೀಡುವ ಬಗ್ಗೆಯೂ ಚರ್ಚಿಸಲಾಯಿತು.
ಇನ್ನು ಇದೇ ವೇಳೆ, ಸಚಿವರು ಕೋವಿಡ್-19 ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಅನ್ನು ಉದ್ಘಾಟಿಸಿದರು.
ಬೆಂಗಳೂರು ಕೇಂದ್ರೀಯ ವಿಭಾಗದವರು ಹಳೆಯ ಬಸ್ ನಿಗಮದ ಕಾರ್ಯಾಗಾರದಲ್ಲಿಯೇ ಅಂದಾಜು ರೂ.50000/-ಗಳ ವೆಚ್ಚದಲ್ಲಿ ಅಗತ್ಯ ಸೌಲಭ್ಯಗಳನ್ನೊಳಗೊಂಡ ಮೊಬೈಲ್ ಫೀವರ್ ಕ್ಲಿನಿಕ್ ಆಗಿ ನಿರ್ಮಿಸಲಾಗಿದೆ.
ಮೊಬೈಲ್ ಫೀವರ್ ಕ್ಲಿನಿಕ್ ಬಸ್ನಲ್ಲಿ ವೈದ್ಯರು, ವೈದ್ಯ ಸಿಬ್ಬಂದಿ ಹಾಗೂ ಜನರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಆಸನಗಳ ವ್ಯವಸ್ಥೆ, ಔಷಧ ಇಡಲು ಬಾಕ್ಸ್, ಕೈ ತೊಳೆಯಲು ಸ್ಯಾನಿಟೈಸರ್ ಹಾಗೂ ಸೋಪ್ ಆಯಿಲ್ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ನೀರಿನ ವ್ಯವಸ್ಥೆ, ಫ್ಯಾನ್ ಹಾಗೂ ಇನ್ನಿತರ ಅಗತ್ಯ ಸೌಕರ್ಯಗಳನ್ನು ಸಹ ಹೊಂದಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು.