ಬೆಂಗಳೂರು : ಯಾವುದೇ ಪಟ್ಟಣಕ್ಕೆ ಹೊರ ವರ್ತುಲ ರಸ್ತೆ ನಿರ್ಮಾಣ ಮಾಡಲು ಇಂಡಿಯನ್ ರೋಡ್ ಕಾಂಗ್ರೆಸ್ ಪ್ರಕಾರ ಆ ಪಟ್ಟಣ ಪ್ರದೇಶದಲ್ಲಿ 1 ಲಕ್ಷ ದಿಂದ 5 ಲಕ್ಷದವರೆಗೂ ಜನಸಂಖ್ಯೆ ಇರಬೇಕಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ಶಾಸಕ ಯಶವಂತ ರಾಯಗೌಡ ವಿಠಲಗೌಡ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಮಾರ್ಗದರ್ಶನದ ಅನ್ವಯ ಬೈಪಾಸ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು. ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯದ ನೀತಿಯಂತೆ ಬೈಪಾಸ್-ವರ್ತುಲ ನೀತಿಗಳಿಗೆ ಬೇಕಾಗುವ ಭೂ ಸ್ವಾಧೀನ ಮೊತ್ತದ ಶೇ.50ರಷ್ಟನ್ನು ರಾಜ್ಯ ಸರ್ಕಾರದಿಂದ ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಮಂತ್ರಾಲಯಕ್ಕೆ ಠೇವಣಿ ಇಡಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಸಾಗರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧ: ಸಿಎಂ ಯಡಿಯೂರಪ್ಪ
ಇಂಡಿ ಪಟ್ಟಣಕ್ಕೆ ಬೈಪಾಸ್ ನಿರ್ಮಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ತಯಾರಿಕೆ ಯಾವ ಹಂತದಲ್ಲಿದೆಯೋ ಹಾಗೆಯೇ ಯಥಾ ಸ್ಥಿತಿಯಲ್ಲಿ ಮುಕ್ತಾಯಗೊಳಿಸುವಂತೆ ನೀತಿ ಹೊರಡಿಸಲಾಗಿದೆ ಎಂದರು.
ಇದನ್ನೂ ಓದಿ:ವಿಧಾನಸಭೆ ಅಧಿವೇಶನ: ಮೊದಲ ದಿನದ ಕಲಾಪದಲ್ಲಿ ಆಸನಗಳು ಖಾಲಿ ಖಾಲಿ!
ದೇವನಹಳ್ಳಿಯಲ್ಲಿ ರಸ್ತೆ ಗುಂಡಿ ಬಿದ್ದಿದ್ದು, ಸೈಕಲ್ ಕೂಡ ಹೋಗುವ ಸ್ಥಿತಿಯಲ್ಲಿಲ್ಲ. ಈ ಬಗ್ಗೆ ಜನರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ವಿಜಯಪುರ ಪಟ್ಟಣದಲ್ಲಿ ಹಾದು ಹೋಗಿರುವ ಎಸ್‍ಎಸ್ 96 ಅನ್ನು 4.95 ಲಕ್ಷ ರೂ. ಹಾಗೂ ದೇವನಹಳ್ಳಿ ಪಟ್ಟಣದ ಮೂಲಕ ಹಾದು ಹೋಗಿರುವ ಜಿಲ್ಲಾ ಮುಖ್ಯ ರಸ್ತೆಗಳನ್ನು 4.9 ಲಕ್ಷ ರೂ.ಗಳಲ್ಲಿ ದುರಸ್ತಿಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಅನುದಾನದ ಲಭ್ಯತೆ ಅನುಸಾರ ವಾಹನಗಳ ಸಾಂದ್ರತೆ ಪರಿಗಣಿಸಿ ದೇವನಹಳ್ಳಿ ಮತ್ತು ವಿಜಯಪುರದಲ್ಲಿ ಚತುಷ್ಪಥ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.