ಬೆಂಗಳೂರು : ಬೆಂಗಳೂರಿನ ವಿವಿಧೆಡೆ ಸಂಚಾರದಟ್ಟಣೆ ಪರಿಶೀಲಿಸಲು ಸ್ಥಳ ಪರಿಶೀಲನೆಗೆ ಹೊರಡುವ ಮುನ್ನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದು ಬಿಡಿಎ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಕಮೀಷನರ್ ಕುಮಾರ್ ನಾಯಕ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ.ರಾಜೇಂದ್ರ ಪ್ರಸಾದ್ ಮತ್ತಿತರರು ಇದ್ದರು.
ಸಭೆಯಲ್ಲಿ ತಾವು ತೆರಳಬೇಕಿರುವ ಕೆ.ಆರ್.ಪುರಂ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವ ವಿವಿಧ ಮಾರ್ಗೋಪಾಯಗಳ ಮಾಹಿತಿ ಪಡೆದುಕೊಂಡರು. ಹೆಬ್ಬಾಳ ಮೇಲು ರಸ್ತೆ, ನಾಗವಾರ, ಕಲ್ಯಾಣನಗರ, ಕೆ.ಆರ್. ಪುರಂ ಮೇಲ್ಸೇತುವೆ (ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣ) ಹೀಗೆ ಹನ್ನೊಂದು ಸ್ಥಳಗಳ ಪರಿಶೀಲನೆಯನ್ನು ಡಿಕೆಶಿ ನಡೆಸಲಿದ್ದಾರೆ.
ಇದನ್ನೂ ಓದಿ : ಬಾಡಿಗೆದಾರರಿಗೂ ಗೃಹಜ್ಯೋತಿ ಉಚಿತ ವಿದ್ಯುತ್.. ತೆರಿಗೆ ಪಾವತಿದಾರರಿಗಿಲ್ಲ ಗೃಹ ಲಕ್ಷ್ಮಿ ಯೋಜನೆ
ನಗರದಲ್ಲಿ ದಿನದಿನಕ್ಕೆ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚುತ್ತಿದೆ. ಸಾರ್ವಜನಿಕರು ಪರದಾಡುತ್ತಿದ್ದಾರೆ. ಇದಕ್ಕೆ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಮತ್ತೊಂದು ಹಂತದ ನಗರ ಪ್ರದಕ್ಷಿಣೆ ನಡೆಸಿದ್ದಾರೆ. ಕಳೆದ ವಾರವಷ್ಟೇ ನಗರದ ವಿವಿಧ ಭಾಗಗಳ ರಾಜಕಾಲುವೆಗಳ ಪರಿಸ್ಥಿತಿ ಪರಿಶೀಲಿಸಿದ್ದ ಸಚಿವರು, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಇಂದೂ ಸಹ ವಿವಿಧ ದಟ್ಟಣೆ ಸ್ಥಳಗಳಿಗೆ ತೆರಳಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಿದ್ದಾರೆ.
ಬಸ್ನಲ್ಲಿ ರೌಂಡ್ಸ್ ಹಾಕಿ ಚರಂಡಿ ವ್ಯವಸ್ಥೆ ವೀಕ್ಷಣೆ : ಮಳೆಗಾಲ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತೆ ಅನಾಹುತಕ್ಕೀಡಾಗುವುದನ್ನು ತಪ್ಪಿಸಲು ಜೂನ್ 8ರಂದು ಡಿ.ಕೆ.ಶಿವಕುಮಾರ್ಬಿಎಂಟಿಸಿ ಬಸ್ನಲ್ಲಿ ಸಿಟಿ ರೌಂಡ್ಸ್ ಹಾಕಿದ್ದರು. ನೀರು ತುಂಬಿಕೊಂಡು ತೊಂದರೆಗೀಡಾಗುವ ಪ್ರದೇಶಗಳನ್ನು ಗುರುತಿಸಿ ಶೀಘ್ರವೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ಡಿಕೆಶಿ ತಮ್ಮ ಟ್ವಿಟರ್ ಖಾತೆಯಲ್ಲಿ, ಮುಂಗಾರು ಪೂರ್ವ ಕಾಮಗಾರಿಗಳ ಪರಿಶೀಲನೆಯ ಭಾಗವಾಗಿ ವರ್ತೂರು ಕೆರೆ ಕಾಮಗಾರಿಗಳ ಪರಿಶೀಲನೆ ನಡೆಸಿದ್ದೇನೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಅಗತ್ಯ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದರು.
ಮುಚ್ಚಿರುವ ರಾಜಕಾಲುವೆ ತೆರವು : ಕಳೆದ ವರ್ಷ ಬೆಂಗಳೂರು ನಗರ ಪಾಲಿಕೆ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ಉಂಟಾಗಿದ್ದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಡಿ.ಕೆ ಶಿವಕುಮಾರ್ ಜೂನ್ 8 ರಂದು ಪರಿಶೀಲನೆ ನಡೆಸಿದ್ದರು. ಬಳಿಕ ಸಿಟಿ ರೌಂಡ್ಸ್ ಬಗ್ಗೆ ಮಾಹಿತಿ ನೀಡಿದ್ದ ಡಿಕೆಶಿ, ನಗರದ ಸಮಸ್ಯೆಗಳನ್ನು ಅರಿತೆ. ಖಾಸಗಿ ಬಿಲ್ಡರ್ಸ್, ಡೆವಲಪರ್ಸ್ಗಳು ಒತ್ತುವರಿ ಮಾಡಿ ಕಾಲುವೆ ಮುಚ್ಚಿರುವುದನ್ನು ಗಮನಿಸಿದ್ದೇನೆ. ಮುಚ್ಚಿರುವ ರಾಜಕಾಲುವೆ ತೆರವುಗೊಳಿಸಲು ಎಷ್ಟೇ ಒತ್ತಡ ಇದ್ದರೂ ನಮಗಿರುವ ಕಾನೂನು ಬಳಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜಕಾಲುವೆ ಒತ್ತುವರಿ ಮಾಡಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಇದಕ್ಕೆ ಯಾವುದೇ ಬಿಲ್ಡರ್ಸ್ಗಳು, ಡೆವಲಪರ್ಸ್ಗಳು ಅವಕಾಶ ಮಾಡಿಕೊಡಬಾರದು ಎಂದು ಹೇಳಿದ್ದರು..
ಇದನ್ನೂ ಓದಿ : ಅಧಿಕಾರಿಗಳೊಂದಿಗೆ ಡಿಸಿಎಂ ಡಿಕೆಶಿ ಬಿಬಿಎಂಪಿ ಬಸ್ಸಲ್ಲಿ ಬೆಂಗಳೂರು ರೌಂಡ್ಸ್