ಬೆಂಗಳೂರು: ನಗರದ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ಲಕ್ಕಸಂದ್ರ ಸುರಂಗ ಮಾರ್ಗ ಹಾಗೂ ಮಹಾತ್ಮ ಗಾಂಧಿ ರಸ್ತೆಯ ಸುರಂಗ ಸ್ಟೇಷನ್ ಬಳಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ತೆರಳಿದ್ದ ಡಿಸಿಂ, ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಲಕ್ಕಸಂದ್ರ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ಪರಿಶೀಲನೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ಬಹಳ ಉತ್ತಮವಾಗಿ ಸಾಗುತ್ತಿದೆ. ಅಧಿಕಾರಿಗಳು ಎಷ್ಟೇ ಹೇಳಿದರೂ ಕಾಮಗಾರಿಯ ಪ್ರಗತಿಯನ್ನು ನಾನು ಕಣ್ಣಾರೆ ನೋಡಬೇಕು ಎಂದು ಇಲ್ಲಿಗೆ ಭೇಟಿ ನೀಡಿದ್ದೇನೆ. ಅಧಿಕಾರಿಗಳ ಮಾಹಿತಿ ಪ್ರಕಾರ 20.9 ಕಿಮೀ ಸುರಂಗ ಮಾರ್ಗ ಆಗಿದೆ. ಒಟ್ಟು 18 ನಿಲ್ದಾಣಗಳನ್ನು ಮಾಡಲಾಗುತ್ತಿದೆ. ನಾಲ್ಕು ಪ್ಯಾಕೇಜ್ನಲ್ಲಿ ಈ ಯೋಜನೆ ನಡೆಯುತ್ತಿದೆ ಎಂದರು.
ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಶೇ. 70% ರಿಂದ 80% ಪೂರ್ಣವಾಗಿದೆ. 2025ರ ಮಾರ್ಚ್ ವೇಳೆಗೆ ಈ ಮೆಟ್ರೋ ಕಾಮಗಾರಿ ಪೂರ್ಣವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು, ಗುತ್ತಿಗೆದಾರರು, ಸರ್ಕಾರದ ಸಹಕಾರ ಬೇಕು. ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡಲು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಬಹಳ ದೊಡ್ಡ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ಸುರಂಗ ರಸ್ತೆ ನಿರ್ಮಾಣದ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಹೇಗೆ ಮಾಡಲಾಗುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ. ಈ ವಿಚಾರವಾಗಿ ಸದ್ಯದಲ್ಲೇ ಮಾಹಿತಿ ನೀಡುತ್ತೇನೆ. ಈ ಕಾಮಗಾರಿಗಳು ತಾಂತ್ರಿಕವಾಗಿ ನಡೆಯುತ್ತವೆ. ಇವು ಬಹಳ ಸುರಕ್ಷಿತವಾಗಿ ಮಾಡಬೇಕಾದ ಕೆಲಸ. ಹೀಗಾಗಿ ಇದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಯಾರು ಟೀಕೆ ಮಾಡುತ್ತಾರೆ ಎಂಬುದು ಮುಖ್ಯ ಅಲ್ಲ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಧರೆಗುರುಳಿದ ಬೃಹತ್ ಮರ: ಏಳೆಂಟು ಕಾರುಗಳು ಜಖಂ, ಕೆಲವರಿಗೆ ಗಾಯ
ನಮ್ಮ ಮೆಟ್ರೋ ನೇರಳೆ ಮಾರ್ಗ ಸೆಪ್ಟೆಂಬರ್ ಒಳಗೆ ಪೂರ್ಣ: ಬೈಯಪ್ಪನಹಳ್ಳಿ- ಕೆ ಆರ್ ಪುರ ಮೆಟ್ರೋ ಜೊತೆಗೆ ಕೆಂಗೇರಿ - ಚಲ್ಲಘಟ್ಟ ನಡುವಿನ ಮೆಟ್ರೋ ಮಾರ್ಗವನ್ನೂ ಏಕಕಾಲಕ್ಕೆ ಪ್ರಯಾಣಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಸೆಪ್ಟೆಂಬರ್ ಎರಡನೇ ವಾರದೊಳಗೆ ಜನರು ಈ ಮಾರ್ಗಗಳಲ್ಲಿ ಸಂಚರಿಸಲು ಸಾಧ್ಯವಾಗುವ ನಿರೀಕ್ಷೆಯಿದೆ. ಮುಂದುವರಿದು ನಮ್ಮ ಮೆಟ್ರೋ ಸಂಸ್ಥೆ ಹೈ ರೆಸಲ್ಯೂಷನ್ ಕ್ಯಾಮರಾಗಳನ್ನು ಅಳವಡಿಸಿ ಪ್ರಯಾಣಿಕರ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಮುಂದಾಗಿದೆ.
ಬೈಯಪ್ಪನಹಳ್ಳಿ - ಕೆ.ಆರ್.ಪುರ ಮೆಟ್ರೋ ನಿಲ್ದಾಣಗಳ ಮಧ್ಯದ 2.1ಕಿ.ಮೀ ಹಾಗೂ ಕೆಂಗೇರಿ - ಚಲ್ಲಘಟ್ಟ ನಡುವಿನ 1.9 ಕಿ.ಮೀ ಮೆಟ್ರೋ ಕಾಮಗಾರಿ ಬಾಕಿ ಇದೆ. ಇವೆರಡೂ ಪೂರ್ಣಗೊಂಡಲ್ಲಿ ನೇರಳೆ ಮಾರ್ಗದ 43.5ಕಿ.ಮೀ ಲೈನ್ ಪೂರ್ಣವಾದಂತಾಗಲಿದೆ. ಹೀಗಾಗಿ ಎರಡೂ ಮಾರ್ಗವನ್ನು ಬೇರೆ ಬೇರೆ ಸಂದರ್ಭದಲ್ಲಿ ಜನತೆಗೆ ಮುಕ್ತಗೊಳಿಸುವ ಬದಲು ಒಂದೇ ಸಮಯಕ್ಕೆ ಪ್ರಯಾಣದ ಅವಕಾಶ ಮಾಡಿಕೊಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.