ಬೆಂಗಳೂರು : ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದಾಗಿ ವಿದ್ಯುತ್ ಕೊರತೆಯಾಗಿದೆ. ಈ ವಿಚಾರವಾಗಿ ಟೀಕೆ ಮಾಡುವ ಬಿಜೆಪಿ ನಾಯಕರು ತಮ್ಮ ಅಧಿಕಾರಾವಧಿಯಲ್ಲಿ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸಿದ್ದರು ಎಂಬುದನ್ನು ಹೇಳಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಳೆ ಬಿದ್ದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಇದೇ ಪರಿಸ್ಥಿತಿ ಇತ್ತು. ಆಗ ನಾವು 10 ರಿಂದ 13 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಿದ್ದೆವು. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಿಲ್ಲ. ಹೀಗಾಗಿ ಈ ಪರಿಸ್ಥಿತಿ ಬಂದಿದೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ರಾಜ್ಯದ ಅಣೆಕಟ್ಟುಗಳಲ್ಲಿ ನೀರಿನ ಲಭ್ಯತೆ ಕಡಿಮೆ ಇದೆ. ಬರಗಾಲ ಎದುರಾದಾಗ ವಿದ್ಯುತ್ ಉತ್ಪಾದನೆ ಕುಸಿಯುತ್ತದೆ. ಅಲ್ಲದೇ ಪ್ರತಿವರ್ಷ ಶೇ 10 ರಿಂದ 15 ರಷ್ಟು ಬೇಡಿಕೆ ಹೆಚ್ಚಾಗುವುದು ವಾಡಿಕೆ. ನಮ್ಮ ಸರ್ಕಾರ ಇನ್ನೂ 10 ಸಾವಿರ ಎಕರೆಯಲ್ಲಿ ಸೋಲಾರ್ ವಿದ್ಯುತ್ ಹಾಗೂ ವಿಂಡ್ ಪವರ್ ಉತ್ಪಾದನೆಗೆ ಕಾರ್ಯಕ್ರಮ ರೂಪಿಸುತ್ತಿದೆ.
ರೈತರಿಂದಲೂ ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚಾಗಿದೆ. ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಈಗಾಗಲೇ ನಮ್ಮ ಸಚಿವರು ಕಾರ್ಯಪ್ರವೃತ್ತರಾಗಿದ್ದು, ಸಮಸ್ಯೆ ಬಗೆಹರಿಸುತ್ತೇವೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಕೇಂದ್ರ ವಿದ್ಯುತ್ ಸಚಿವರ ಬಳಿ ಚರ್ಚೆ ಮಾಡಿ ಕೇಂದ್ರಿಯ ಗ್ರಿಡ್‌ಗಳಿಂದ ವಿದ್ಯುತ್ ಪೂರೈಕೆಗೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಕಾವೇರಿ- ಮೇಲ್ಮನವಿ ಸಲ್ಲಿಸುತ್ತೇವೆ: ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೂ ಮುನ್ನ ಕೆಪಿಸಿಸಿ ಕಚೇರಿ ಬಳಿ ಕಾವೇರಿ ನೀರು ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ಮತ್ತೊಮ್ಮೆ ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದೆ ಮೇಲ್ಮನವಿ ಸಲ್ಲಿಸುತ್ತೇವೆ. ಬೆಂಗಳೂರಿನ ಸುತ್ತಮುತ್ತ ಮಳೆ ಸುರಿದಿರುವ ಪರಿಣಾಮ ಬಿಳಿಗುಂಡ್ಲುವಿಗೆ ಹರಿಯುವ ನೀರಿನ ಪ್ರಮಾಣ ಅಲ್ಪ ಪ್ರಮಾಣದಲ್ಲಿ ಸರಿದೂಗಿದೆ. ಮಳೆ ಸುರಿದಿದ್ದು ಎರಡು ಮೂರು ದಿನ ಮಾತ್ರ. 200ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಸಂಕಷ್ಟದಲ್ಲಿ ಇದ್ದೇವೆ ಎಂದು ಡಿಕೆಶಿ ಹೇಳಿದರು.
ಮಹಾರಾಷ್ಟ್ರ ಮತ್ತೆ ಗಡಿ ವಿಚಾರದಲ್ಲಿ ಖ್ಯಾತೆ ತೆಗೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ರಾಜ್ಯದಲ್ಲಿ ನಾವು ಮಾಡುತ್ತೇವೆ, ಅವರ ರಾಜ್ಯದಲ್ಲಿ ಅವರು ಮಾಡಲಿ. ಸುಮ್ಮನೆ ಅಶಾಂತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಇದನ್ನೂ ಓದಿ: ಕಾವೇರಿ ಜಲ ವಿವಾದ; ಸಿಡಬ್ಲ್ಯುಆರ್‌ಸಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ ಎಂದ ಡಿಸಿಎಂ ಡಿಕೆಶಿ