ಬೆಂಗಳೂರು : "ನಾನು ಮಾತನಾಡ್ತೇನೆ, ಎಲ್ಲದಕ್ಕೂ ಶುಭ ಸಮಯ, ಶುಭ ಲಗ್ನ, ಮುಹೂರ್ತ ಬರಬೇಕು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚ್ಯವಾಗಿ ತಿಳಿಸಿದರು. ಬಿಬಿಎಂಪಿಯಲ್ಲಿ ಏನ್ ನಡೀತಾ ಇದೆ ಅನ್ನೋದನ್ನು ಇನ್ನೆರಡು ದಿನಗಳಲ್ಲಿ ಬಿಚ್ಚಿಡುತ್ತೇನೆ ಎಂದು ಹೆಚ್ಡಿಕೆ ಹೇಳಿಕೆ ನೀಡಿದ್ದಾರೆ. ಹೇಮಂತ್ಗೆ ನೀವು ಬೆದರಿಕೆ ಹಾಕಿ ಕ್ಷಮೆ ಕೇಳುವಂತೆ ಮಾಡಿದ್ದೀರಂತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, "ಎಲ್ಲ ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ನಿಲ್ಲಿಸಲು ಸಾಧ್ಯವಿದೆಯೇ?. ಏನು ಬೇಕಾದ್ರೂ ಮಾಡಲಿ. ಅವರ ಹತ್ರ ಏನು ಮಾಹಿತಿಯಿದೆಯೋ ಇಡಲಿ. ಎಲ್ಲರಿಗೂ ಅವಕಾಶವಿದೆ" ಎಂದು ಹೇಳಿದರು.
ಈ ಮಾತಿನ ಜಟಾಪಟಿ ವೈಯಕ್ತಿಕವೋ, ರಾಜಕೀಯವೋ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಅವರ ಜೊತೆ ನಾನ್ಯಾಕೆ ಜಟಾಪಟಿ ಮಾಡಲಿ?. ರಾಜಕೀಯ ಯುದ್ದ ಮಾಡಾಯ್ತು, ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ನಿನ್ನೆ ನಾನೇ ಹೇಳಿದ್ನಲ್ಲ, ನನಗೆ ಸಿಗಲಿಲ್ಲ ಅಂತ, ಈ ತರಹ ಕೈಹಿಸುಕ್ತಿದ್ರೆ ಏನ್ ಮಾಡೋಕಾಗುತ್ತೆ" ಎಂದು ವಾಗ್ದಾಳಿ ನಡೆಸಿದರು.
ಶಾಸಕರ ಆಪರೇಷನ್ ಹಸ್ತದ ವಿಚಾರವಾಗಿ ಮಾತನಾಡಿ, "ನನ್ನ ಹತ್ತಿರ ಯಾರೂ ಏನೂ ಮಾತನಾಡಿಲ್ಲ. ಅವರವರ ರಾಜಕೀಯ ಜೀವನದ ಬಗ್ಗೆ ಅವರವರೇ ತೀರ್ಮಾನಿಸುತ್ತಾರೆ. ಅವರವರ ಬದುಕಿನ ಬಗ್ಗೆ ಅವರವರ ಭವಿಷ್ಯದ ಬಗ್ಗೆ ಅವರವರದ್ದೇ ತೀರ್ಮಾನ. ನನ್ನ ಹತ್ತಿರ ಯಾರೂ ಚರ್ಚಿಸಿಲ್ಲ. ಹಿಂದೆ ಟಾರ್ಗೆಟ್ ಮಿಸ್ ಆದ ಬಗ್ಗೆ ಮುಂದೆ ಮಾತನಾಡುತ್ತೇನೆ. ಬೂತ್ಗಳಲ್ಲಿ ಓಟ್ ಶೇರಿಂಗ್ ಜಾಸ್ತಿ ಆಗಬೇಕಿದೆ. ಸಚಿವನಾಗಿ ನಾನು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು" ಎಂದರು.
ಕೋಮು ಶಕ್ತಿಗಳ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ: "ಅಹಿಂಸೆ, ಶಾಂತಿ, ಸೌಹಾರ್ದತೆ, ಭ್ರಾತೃತ್ವದ ಭದ್ರ ಬುನಾದಿಯ ಮೇಲೆ ನಿರ್ಮಾಣವಾಗಿರುವ ಈ ದೇಶದಲ್ಲಿ ಧರ್ಮ, ಜಾತಿ, ವರ್ಣದ ವಿಷಬೀಜ ಬಿತ್ತಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಅಗತ್ಯವಿದೆ. ಅಂದಿನ ಸ್ವಾತಂತ್ರ್ಯ ಸಂಗ್ರಾಮ ಬ್ರಿಟೀಷರ ವಿರುದ್ಧ ನಡೆದಿತ್ತು. ಇಂದಿನ ಸಂಗ್ರಾಮ ಕೋಮುವಾದಿ ಶಕ್ತಿಗಳ ವಿರುದ್ಧ ನಡೆಯಬೇಕು" ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿಂದು 77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಅವರು, ಅಂದು ಕಾಂಗ್ರೆಸ್ ನೇತೃತ್ವದಲ್ಲಿ ದೇಶವೇ ಒಂದಾಗಿತ್ತು. ಇಂದು ಕಾಂಗ್ರೆಸ್ ನೇತೃತ್ವದಲ್ಲಿ 'ಇಂಡಿಯಾ' ಒಂದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: 77th Independence Day: ಕೋಮು ಶಕ್ತಿಗಳ ವಿರುದ್ಧ ಇಂದಿನ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕು: ಡಿಸಿಎಂ ಡಿಕೆಶಿ