ಬೆಂಗಳೂರು: ಬೆಳಗಾವಿ, ಮಂಗಳೂರಿನಲ್ಲಿ ಚಿಪ್ ಉತ್ಪಾದನಾ ಘಟಕ ಸ್ಥಾಪಿಸುವುದಾದರೆ ಸರ್ಕಾರ ಅಗತ್ಯ ಸಹಕಾರ ನೀಡಲು ಸಿದ್ಧವಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಇಂಟೆಲ್ ಸಂಸ್ಥೆಗೆ ಭರವಸೆ ನೀಡಿದ್ದಾರೆ.
ಇಂಟೆಲ್ ಭಾರತದ ಮುಖ್ಯಸ್ಥೆ ನಿವೃತ್ತಿ ರಾಯ್ ಹಾಗೂ ಸಂಸ್ಥೆಯ ಅಧಿಕಾರಿಗಳೊಂದಿಗೆ ಡಿಸಿಎಂ ಅಶ್ವತ್ಥ ನಾರಾಯಣ ಇಂದು ವಿಡಿಯೋ ಸಂವಾದ ನಡೆಸಿದರು.
ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಇಂಟೆಲ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಂವಾದಕ್ಕೂ ಮೊದಲು ಡಿಸಿಎಂ ಅಶ್ವತ್ಥ ನಾರಾಯಣ ಅವರನ್ನು ಭೇಟಿಯಾದ ಇಂಟೆಲ್ ಇಂಡಿಯಾ ಬಿಸಿನೆಸ್ ಆಪರೇಷನ್‌ನ ನಿರ್ದೇಶಕ ಮಾನಸ್ ದಾಸ್ ಅವರು ಒಂದು ಕೋಟಿ ರೂ. ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಮಂಗಳೂರಿನಲ್ಲೇ ಬಂದರು ಇದೆ. ಬೆಳಗಾವಿಗೆ ಗೋವಾ ಬಂದರು ಸಮೀಪದಲ್ಲಿದೆ. ಈ ಎರಡೂ ಕಡೆಗಳಲ್ಲಿ ಚಿಪ್ ಉತ್ಪಾದನಾ ಘಟಕ ಸ್ಥಾಪನೆಗೆ ಅಗತ್ಯ ಸ್ಥಳಾವಕಾಶವೂ ಇದೆ. ಇಂಟೆಲ್ ಸಂಸ್ಥೆ ಈ ಅವಕಾಶವನ್ನು ಬಳಸಿಕೊಳ್ಳುವುದಾದರೆ, ಸರ್ಕಾರದ ಕಡೆಯಿಂದ ಅಗತ್ಯ ಸಹಕಾರ ಒದಗಿಸಲಾಗುವುದೆಂದು ಭರವಸೆ ನೀಡಿದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂ. ದೇಣಿಗೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಸರ್ಕಾರದ ಪರವಾಗಿ ಅವರಿಗೆ ಧನ್ಯವಾದ ತಿಳಿಸಿದರು.
ಇಂಟೆಲ್ ಅಧಿಕಾರಿಗಳಾದ ಅನಂತ ನಾರಾಯಣ, ಜಿತೇಂದ್ರ ಚಡ್ಡ, ಮಾನಸ್ ದಾಸ್, ಆನಂದ್ ದೇಶಪಾಂಡೆ, ಅಂಜಲಿ ರಾವ್, ವರ್ಟಿಕಲ್ ಸಲ್ಯೂಶನ್ ಗ್ರೂಪ್‌ನ ಉಪಾಧ್ಯಕ್ಷ ಕಿಶೋರ್ ರಾಮಿಶೆಟ್ಟಿ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.