ಬೆಂಗಳೂರು: ಈ ವರ್ಷದಿಂದಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಜತೆ ಮಾತುಕತೆ ನಡೆಸಿದರು. ಬೆಂಗಳೂರಿನ ಜಯನಗರದಲ್ಲಿರುವ ಮಠದ ಶಾಖಾ ಕೇಂದ್ರಕ್ಕೆ ಇಂದು ತೆರಳದ ಡಿಸಿಎಂ, ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ಶ್ರೀಗಳಿಗೆ ವಿವರಿಸಿದರು.
ಇದನ್ನೂ ಓದಿ: ಜಿಂಕೆ ಹಿಂಡಿನ ಮೇಲೆ ಏಕಾಏಕಿ ದಾಳಿ ಮಾಡಿದ ಹುಲಿ.. ವಿಡಿಯೋ ನೋಡಿ!
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀಗಳು ನೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವರ್ಷದಿಂದಲೇ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳಲ್ಲಿ ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡುವುದಾಗಿ ತಿಳಿಸಿದ್ದಾರೆ. ಇದು ಒಳ್ಳೆಯ ಆರಂಭ. ಯುವಕರಿಗೆ ಗುಣಮಟ್ಟದ ಮತ್ತು ಭರವಸೆಯ ಶಿಕ್ಷಣ ನೀಡುವುದೂ ಸೇರಿ ಶಿಕ್ಷಣದ ಎಲ್ಲ ಹಂತಗಳಲ್ಲೂ ತಂತ್ರಜ್ಞಾನ ಬಳಕೆಯನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿ ಅವರು ಮಾರ್ಗದರ್ಶನ ನೀಡಿದರು ಎಂಬುದಾಗಿ ಡಿಸಿಎಂ ಹೇಳಿದರು.
ಕೋವಿಡ್ ನಿರ್ವಹಣೆ ಬಗ್ಗೆಯೂ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಲಾಯಿತು. ಅತಿ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಆಮ್ಲಜನಕ ಘಟಕಗಳ ಸ್ಥಾಪನೆ, ತುರ್ತು ಚಿಕಿತ್ಸೆ, ಐಸಿಯು ಮುಂತಾದ ಸೌಲಭ್ಯಗಳ ಬಗ್ಗೆ ಶ್ರೀಗಳು ಪ್ರಸ್ತಾಪ ಮಾಡಿದರು. ಶ್ರೀಗಳ ಆಶಯದಂತೆ ಸರ್ಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದೆ ಎಂದರು.
ರಾಜಕೀಯ ಉದ್ದೇಶದ ಭೇಟಿ ಅಲ್ಲ: ಸುತ್ತೂರು ಮಠಕ್ಕೆ ರಾಜಕೀಯ ಉದ್ದೇಶಕ್ಕೆ ಭೇಟಿ ನೀಡಿದ್ದೀರಾ? ಎಂಬ ಪ್ರಶ್ನೆಗೆ ಉತ್ತರ ನೀಡಿದ ಡಿಸಿಎಂ, "ನನ್ನದು ಖಂಡಿತಾ ರಾಜಕೀಯ ಉದ್ದೇಶಿತ ಭೇಟಿ ಅಲ್ಲ. ಶಿಕ್ಷಣ ನೀತಿ ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಳ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯುವುದಷ್ಟೇ ಉದ್ದೇಶವಾಗಿತ್ತು" ಎಂದರು.
ಗೊಂದಲ ಅಲ್ಲ, ಮಕ್ಕಳ ಹಿತವಷ್ಟೇ ಮುಖ್ಯ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಇಬ್ಬರೂ ಸಚಿವರು ಮಕ್ಕಳ ಹಿತದ ಬಗ್ಗೆ ಮಾತ್ರ ಆಲೋಚನೆ ಮಾಡಿದ್ದಾರಷ್ಟೇ. ಪರೀಕ್ಷೆ ಕೂಡ ಮುಖ್ಯ. ಯಾವ ಸಂದರ್ಭದಲ್ಲಿ ಏನೇನು ಆಗಬೇಕೋ ಅದೆಲ್ಲ ನಡೆದರೆ ಉತ್ತಮ ಎಂದ ಡಿಸಿಎಂ, ಈಗ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಪರೀಕ್ಷೆ ನಡೆಸಿದರೆ ತಪ್ಪೇನೂ ಇಲ್ಲ. ಮಕ್ಕಳ ಭವಿಷ್ಯವೂ ಮುಖ್ಯ ಎಂದರು.
ಜುಲೈ 5ರಂದು ಸಭೆ : ಜುಲೈ 5ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಇದೆ. ಕೋವಿಡ್ ಹಿನ್ನೆಲೆಯಲ್ಲಿ ಯಾವುದಕ್ಕೆಲ್ಲ ಅವಕಾಶ ನೀಡಬೇಕು - ನೀಡಬಾರದು ಎಂದು ಅಂದು ನಿರ್ಧಾರ ಕೈಗೊಳ್ಳಲಾಗುವುದು. ಉನ್ನತ ಶಿಕ್ಷಣದ ಶೈಕ್ಷಣಿಕ ವರ್ಷ ಈಗಾಗಲೇ ಆನ್‌ಲೈನ್ ಮೂಲಕ ನಡೆಯುತ್ತಿದೆ. ನೇರ ತರಗತಿಗಳ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: SSLC ಪರೀಕ್ಷೆಗೆ ಮಕ್ಕಳ ಸಿದ್ಧತೆ ಹೇಗಿದೆ.. ವಿದ್ಯಾರ್ಥಿಗಳು ಏನಂತಾರೆ?
ಕೆಂಪೇಗೌಡ ಜಯಂತಿ ಸಮಾರಂಭಕ್ಕೆ ಸಚಿವ ಅಶೋಕ್ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಕಾರ್ಯಕ್ರಮ ನಡೆದಿದೆ. ಅನೇಕ ಕಡೆ ಅದೇ ದಿನ ಕಾರ್ಯಕ್ರಮ ನಡೆದಿವೆ. ವಿಧಾನಸೌಧದ ಕಾರ್ಯಕ್ರಮಕ್ಕೆ ಬರಲು ಆಗದವರು ಬೇರೆ ಬೇರೆ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ ಎಂದು ಸ್ಪಷ್ಟಪಡಿಸಿದರು.