ಬೆಂಗಳೂರು: ಬಿಬಿಎಂಪಿಯ ಎಲ್ಲಾ ವಾರ್ಡ್ಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಮಳಿಗೆ ತೆರೆಯುವುದು ಹಾಗೂ ನಗರದ ಎಲ್ಲಾ ಆಸ್ಪತ್ರೆ, ಲ್ಯಾಬ್ಗಳ ಮಾಹಿತಿ ಪಾಲಿಕೆಗೆ ಸಿಗುವಂತೆ ಮಾಡಲು ವ್ಯವಸ್ಥೆ ಜಾರಿ ಮಾಡಬೇಕು ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ತಿಳಿಸಿದರು.
ಈ ಸಂಬಂಧ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆರೋಗ್ಯ ವ್ಯವಸ್ಥೆಯಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡುವ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಪೂರೈಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಪಿಇ ಕಿಟ್, ಔಷಧಿಗಳು, ಆಕ್ಸಿಜನ್ ಸೆಂಟರ್ಸ್ ಹಾಗೂ ಸಿಬ್ಬಂದಿ ನೇಮಕಾತಿ ಕುರಿತು ಚರ್ಚೆ ನಡೆದಿದೆ. ಬಿಬಿಎಂಪಿ ಹೆಲ್ತ್ ಕೇರ್ ಹೆಸರಲ್ಲಿ ಇನ್ನಷ್ಟು ಸದೃಢತೆ ತರಲಾಗುತ್ತದೆ. ಪಾಲಿಕೆಯ 133 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಮನೆ ಮನೆಗಳಿಗೆ ತೆರಳಿ ಆರೋಗ್ಯ ಸರ್ವೇ ನಡೆಸಿ, ಮಾಹಿತಿ ಸಂಗ್ರಹಿಸಿ ತುರ್ತಾಗಿ ರಿಪೋರ್ಟ್ ನೀಡುವಂತೆ ತಿಳಿಸಲಾಗಿದೆ.
ಔಷಧಿ ಪೂರೈಕೆಯಲ್ಲಿ ಕೊರತೆ ಇದ್ದರೆ ಅದನ್ನು ಸರಿಪಡಿಸಲು ಸೂಚಿಸಿದರು. ಅರವತ್ತು ವಯಸ್ಸು ಮೀರಿದವರಿಗೆ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿ ಔಷಧಿ ಸಿಗಬೇಕು. ಎಲ್ಲಾ 198 ವಾರ್ಡ್ಗಳ ಪ್ರಾಥಮಿಕ ಔಷಧಿ ಕೇಂದ್ರಗಳಲ್ಲಿ ಜನೌಷಧಿ ಮಳಿಗೆ ತೆರಯಬೇಕು. ಆ ಮೂಲಕ ಹಿರಿಯರಿಗೆ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಔಷಧಿ ಹಾಗೂ ಟೆಸ್ಟಿಂಗ್ ನಡೆಸಬೇಕು. ಇದು 24/7 ನಡೆಯಬೇಕು ಎಂದರು.
ರಾತ್ರಿ ಹೊತ್ತಿನಲ್ಲೂ ಟೆಲಿ ಕನ್ಸಲ್ಟೇಷನ್ಗೆ ವೈದ್ಯರು ಸಿದ್ಧರಿರಬೇಕು. ಪುನರ್ವಸತಿ ಕೇಂದ್ರಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು. ನಗರದ ಆರೋಗ್ಯ ವಿಚಾರದಲ್ಲಿ ಎಲ್ಲಿ ಏನೇ ಆದರೂ ಸಂಪೂರ್ಣ ಮಾಹಿತಿ ಬಿಬಿಎಂಪಿಗೆ ಸಿಗುವಂತಾಗಬೇಕು ಎಂದರು.