ಬೆಂಗಳೂರು: ಕೊರೊನಾ ಪಾಸಿಟಿವ್ ಇದ್ದರೂ ಮಾನಸಿಕವಾಗಿ ಯಾವುದೇ ಒತ್ತಡ ಇಟ್ಟುಕೊಳ್ಳದೇ, ಧೈರ್ಯದಿಂದ ಬಂದು ಸಿಇಟಿ ಪರೀಕ್ಷೆ ಬರೆದ ಕೊರೊನಾ ಸೋಂಕಿತ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಎರಡನೇ ದಿನದ ಸಿಇಟಿ ಪರೀಕ್ಷೆ ನಿಮಿತ್ತ ಸೇಂಟ್ ಜೋಸೆಫ್ ಕಾಲೇಜಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನ ಪರಿಶೀಲಿಸಿದರು. ವಿದ್ಯಾರ್ಥಿಗಳ ಜೊತೆ ಮಾತನಾಡಿ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿದ ಡಿಸಿಎಂ ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಧನ್ಯವಾದ ಹೇಳಿದ್ರು.
ನಮ್ಮ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸವಾಲಿನ ಸಮಯದಲ್ಲಿ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಪರೀಕ್ಷೆ ನಡೆಯಲು ಉತ್ತಮವಾಗಿ ಸಹಕಾರ ನೀಡಿವೆ ಎಂದರು.
ಇದು ಒಳ್ಳೆಯ ದಿಕ್ಸೂಚಿಯಾಗಿದ್ದು, ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ. ಈಗ ನಾನು ಪರೀಕ್ಷಾ ಕೇಂದ್ರದಲ್ಲಿ ಹೊರನಾಡಿನ ಕನ್ನಡಿಗನ ಜೊತೆ ಮಾತನಾಡಿದೆ. ಎಲ್ಲರ ಸಹಕಾರ ಸಿಕ್ಕಿದೆ. ಪರೀಕ್ಷಾ ಕೇಂದ್ರದಲ್ಲಿ ಎಲ್ಲ ವ್ಯವಸ್ಥೆ ಚೆನ್ನಾಗಿದೆ. ವಿದ್ಯಾರ್ಥಿಗಳು ತುಂಬಾ ನಿರಾಳರಾಗಿ ಪರೀಕ್ಷೆ ಬರೆಯುತ್ತಿದ್ಧಾರೆ. ಈ ಯಶಸ್ಸು ವಿದ್ಯಾರ್ಥಿಗಳಿಗೆ ಸಲ್ಲಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೊನಾ ಪಾಸಿಟಿವ್ ವಿದ್ಯಾರ್ಥಿಗಳು ಕೂಡ ನಾರ್ಮಲ್ ವಿದ್ಯಾರ್ಥಿಗಳಂತೆ ನಿರಾಳರಾಗಿ ಪರೀಕ್ಷೆ ಬರೆದಿದ್ದಾರೆ. ಕಳೆದ ವರ್ಷಕ್ಕಿಂತಲೂ ಯಶಸ್ವಿಯಾಗಿ ಈ ವರ್ಷ ಸಿಇಟಿ ಪರೀಕ್ಷೆ ನಡೆಯುತ್ತಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಸಂತಸ ವ್ಯಕ್ತಪಡಿಸಿದರು.