ಬೆಂಗಳೂರು: ಉಚಿತ ಲ್ಯಾಪ್‌ಟಾಪ್ ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್ನೆಟ್ ಸೇವೆ, ಡಾಂಗಲ್ ನೀಡಬೇಕೆಂದು ಇಂಟರ್ನೆಟ್ ಪೂರೈಕೆದಾರರಿಗೆ ಮನವಿ ಮಾಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ತಿಳಿಸಿದರು.
ಬಹು ಮಹಡಿ ಕಟ್ಟಡದಲ್ಲಿ ಅಂತರ್ಜಾಲ ಪೂರೈಕೆದಾರರ ಜೊತೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಮೊದಲ ವರ್ಷದ 1.10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಗಿತ್ತು. ಇದೀಗ ಅವರು ಸೆಕೆಂಡ್ ಇಯರ್ಗೆ ಹೋಗುತ್ತಾರೆ. ಈ ವಿದ್ಯಾರ್ಥಿಗಳಿಗೆ ಉಚಿತ ಅಂತರ್ಜಾಲ ಸಂಪರ್ಕ ಮತ್ತು ಡಾಂಗಲ್ ನೀಡುವಂತೆ ಮನವಿ ಮಾಡಿದ್ದೇವೆ. ಅದಕ್ಕೆ ಅವರು ಒಪ್ಪಿದ್ದು, ವಿದ್ಯಾರ್ಥಿಗಳ ಮಾಹಿತಿ ನೀಡುವಂತೆ ಕೇಳಿದ್ದಾರೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಸ್ಪೀಡ್ ಕಡಿಮೆ ಇರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ಯಾವ್ಯಾವ ಗ್ರಾಮ ಪಂಚಾಯತ್ಗಳಿಗೆ ಇಂಟರ್ನೆಟ್ ಸ್ಪೀಡ್ ಎಷ್ಟಿದೆ ಎಂಬ ಮಾಹಿತಿಯನ್ನು ಕೇಳಿದ್ದೇವೆ. ಇಂಟರ್ನೆಟ್ ಸರಬರಾಜಿನಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ ಎಂದು ಅವರು ಗಮನಕ್ಕೆ ತಂದಿದ್ದಾರೆ. ಅವರ ಸಮಸ್ಯೆ ಬಗೆಹರಿಸಲು ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದೇವೆ ಎಂದರು.
ಜೊತೆಗೆ ಕೆಲ ಇಂಟರ್ನೆಟ್ ಪ್ರೊವೈಡರ್ಗಳು ಸರ್ಕಾರದ ಪರವಾನಗಿ ಪಡೆಯದೆ, ಟವರ್, ಕೇಬಲ್ ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಎಲ್ಲದಕ್ಕೂ ಸರ್ಕಾರದ ಅನುಮತಿ ಪಡೆಯಬೇಕೆಂದು ಸೂಚಿಸಿದ್ದೇನೆ ಎಂದರು. ನಿಮ್ಮ ಸಮಸ್ಯೆ ಏನೇ ಇದ್ದರೂ, ಅದನ್ನು ಸಿಎಂ ಜೊತೆ ಚರ್ಚೆ ಮಾಡಿ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದೇವೆ ಎಂದರು.
ವರ್ಕ್ ಫ್ರಮ್ ಹೋಮ್ ಉತ್ತಮ : ಯಾರ್ಯಾರಿಗೆ ಯಾವುದು ಒಳ್ಳೆಯದೋ ಅದನ್ನು ಮಾಡಿಕೊಳ್ಳುವುದು ಕಂಪನಿ ಮತ್ತು ಉದ್ಯೋಗಿಗಳಿಗೆ ಬಿಟ್ಟಿದ್ದು. ಮನೆಯಲ್ಲೇ ಕೆಲಸ ಮಾಡುವುದು ಸಾಕಷ್ಟು ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ. ಮನೆಯಲ್ಲೇ ಕೆಲಸ ಮಾಡಿದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗುತ್ತದೆ. ಈ ಬಗ್ಗೆ ಆಯಾಯ ಕಂಪನಿಗಳು ನಿರ್ಧಾರ ಕೈಗೊಳ್ಳುತ್ತವೆ ಎಂದರು.
ಇನ್ವೆಸ್ಟ್ ಇಂಡಿಯಾ ಜತೆ ಸಭೆ : ಇಂದು ಇನ್ವೆಸ್ಟ್ ಇಂಡಿಯಾ ಕಾರ್ಯಕ್ರಮದ ವಿಡಿಯೋ ಕಾನ್ಫರೆನ್ಸ್ ನಡೆದಿದೆ. ಎಲೆಕ್ಟ್ರಾನಿಕ್ ಸೆಕ್ಟರ್, ಡಿಸೈನ್ ಅಂಡ್ ಮ್ಯಾನ್ಯುಫ್ಯಾಕ್ಚರ್ ವಿಚಾರವಾಗಿ ದೇಶ ಹೇಗೆ ಮತ್ತಷ್ಟು ಪ್ರಗತಿ ಸಾಧಿಸಬೇಕೆಂಬ ಬಗ್ಗೆ ಚರ್ಚೆ ನಡೆದಿದೆ ಎಂದರು.
ಈ ಕ್ಷೇತ್ರದಲ್ಲಿ ಶೇ.67ರಷ್ಟು ಉತ್ಪಾದನೆ ರಾಜ್ಯದಲ್ಲಿ ಆಗಲಿದೆ. ಹೀಗಾಗಿ ಎಲ್ಲರೂ ಬೆಂಗಳೂರಿನ ಕಡೆ ನೋಡುತ್ತಾರೆ. ಉದ್ಯಮಗಳಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದೇವೆ. ಮೈಸೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ, ಚಿತ್ರದುರ್ಗದಲ್ಲಿ ಎಲೆಕ್ಟ್ರಾನಿಕ್ ಪಾರ್ಕ್ ನಿರ್ಮಾಣಕ್ಕೆ ನಿರ್ಧರಿಸಿದ್ದೇವೆ. ಈ ಕ್ಷೇತ್ರದಲ್ಲಿ ಮತ್ತಷ್ಟು ಹೊಸ ನೀತಿಗಳನ್ನು ಜಾರಿಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ವಿವರಿಸಿದರು.