ಬೆಂಗಳೂರು: ಕ್ರೆಡಿಟ್ ಸೊಸೈಟಿಗಳು ಹಾಗೂ ಅರ್ಬನ್ ಬ್ಯಾಂಕ್ಗಳ ಮೇಲೆ ಹೆಚ್ಚಿನ ಫೋಕಸ್ ಮಾಡಬೇಕು. ಯಾವ ಜಿಲ್ಲೆಯ ಬ್ಯಾಂಕ್ಗಳು ಗುರಿ ಮುಟ್ಟಿಲ್ಲವೋ ಅಂತಹ ಕಡೆಗಳಲ್ಲಿ ನೋಡಲ್ ಅಧಿಕಾರಿಗಳು ವಾರಕ್ಕೊಮ್ಮೆಯಂತೆ ಭೇಟಿ ನೀಡಿ ಪ್ರಗತಿ ಸಾಧಿಸಬೇಕು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಆರ್ಥಿಕ ಸ್ಪಂದನ ಹಾಗೂ ಡಿಸಿಸಿ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಿವಿಧ ಯೋಜನೆಗಳಡಿ ಸಾಲ ವಿತರಣೆಗೆ ಬ್ಯಾಂಕ್ಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಪ್ರಮುಖ ಸ್ಕೀಂಗಳಿದ್ದು, ಇವುಗಳ ಮೂಲಕ ಗುರಿ ಸಾಧಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಹಾಗೂ ಶ್ರಮ ವಹಿಸಬೇಕೆಂದು ಸಚಿವರು ಸೂಚನೆ ನೀಡಿದರು.
ಕೆಲವು ಯೋಜನೆಗಳ ಬಗ್ಗೆ ಬ್ಯಾಂಕ್ಗಳಲ್ಲಿಯೇ ಮಾಹಿತಿ ಇಲ್ಲವೆಂಬುದು ನನ್ನ ಗಮನಕ್ಕೆ ಬಂದಿದೆ. ಹಾಗಾದಲ್ಲಿ ಆ ಯೋಜನೆ ಇದ್ದೂ ಉಪಯೋಗವಿಲ್ಲ. ಇದರಿಂದ ಸಾರ್ವಜನಿಕರು ಸೌಲಭ್ಯದಿಂದ ವಂಚಿತರಾಗುತ್ತಾರೆ. ಹೀಗಾಗಿ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ನಿಗಾ ವಹಿಸಬೇಕು. ಎಲ್ಲ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಉದ್ದೇಶವನ್ನು ಸಾಕಾರಗೊಳಿಸಬೇಕೆಂದು ಸಚಿವರು ಸೂಚನೆ ನೀಡಿದರು.
ಆರ್ಥಿಕ ಸ್ಪಂದನದಡಿ ಅಭೂತಪೂರ್ವ ಯಶಸ್ಸು : ಆರ್ಥಿಕ ಸ್ಪಂದನ ಯೋಜನೆಯಡಿ ಬಹುತೇಕ ಡಿಸಿಸಿ ಬ್ಯಾಂಕ್ಗಳು, ಅಪೆಕ್ಸ್ ಬ್ಯಾಂಕ್ಗಳು ಹಾಗೂ ನಬಾರ್ಡ್ನಿಂದ ಉತ್ತಮ ಸಾಧನೆ ತೋರಿದ್ದು, ಶೇ. 96 ಗುರಿ ಮುಟ್ಟಲಾಗಿದೆ. ಅಂದರೆ 2020-21ನೇ ಸಾಲಿಗೆ 39,072 ಕೋಟಿ ಮೊತ್ತದ ಸಾಲ ವಿತರಣೆ ಗುರಿಯಲ್ಲಿ 37366 ಕೋಟಿ ರೂಪಾಯಿ ಸಾಲ ವಿತರಣೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದಕ್ಕೆ ಸಹಕಾರ ವಲಯದ ಎಲ್ಲ ಬ್ಯಾಂಕ್ಗಳು ಅತ್ಯುತ್ತಮವಾಗಿ ಕೆಲಸ ಮಾಡಿರುವುದರಿಂದ ಇದೀಗ ಕರ್ನಾಟಕವು ದೇಶದಲ್ಲಿಯೇ ಮೊದಲ ಸ್ಥಾನಗಳಿಸಿದೆ. ನಾವು ಇದೇ ಸಾಧನೆಯನ್ನು ಮುಂದೂ ಇಟ್ಟುಕೊಳ್ಳಬೇಕಿದ್ದು, ಆ ನಿಟ್ಟಿನಲ್ಲಿ ಶ್ರಮ ಹಾಕಿ ಎಂದು ಸಚಿವರು ಸಲಹೆ ನೀಡಿದರು.
ಈ ಮಾಸಾಂತ್ಯದೊಳಗೆ ಗುರಿ ಮುಟ್ಟಿ : ಡಿಸಿಸಿ ಬ್ಯಾಂಕ್ಗಳು ಉತ್ತಮವಾಗಿ ಪ್ರಗತಿ ಸಾಧಿಸಿರುವುದು ಗಮನಕ್ಕೆ ಬಂದಿದೆ. ಇನ್ನು ಗುರಿ ಮುಟ್ಟದ ಡಿಸಿಸಿ ಬ್ಯಾಂಕ್ಗಳು, ಅಪೆಕ್ಸ್ ಹಾಗೂ ಉಳಿದ ಸಹಕಾರಿ ಬ್ಯಾಂಕ್ಗಳು ಈ ತಿಂಗಳೊಳಗೆ ಶೇಕಡಾ 100 ಗುರಿ ಮುಟ್ಟುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು. ಇನ್ನು ವಿವಿಧ ಯೋಜನೆಗಳಡಿ ಶೇಕಡಾ ನೂರು ಗುರಿ ಮುಟ್ಟದ ಬ್ಯಾಂಕ್ಗಳು ಈ ಮಾರ್ಚ್ ಅಂತ್ಯದೊಳಗೆ ಪ್ರಗತಿ ಸಾಧಿಸಬೇಕು ಎಂದು ಸೋಮಶೇಖರ್ ಹೇಳಿದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಹಕಾರ ಸಂಘಗಳ ನಿಬಂಧಕ ಜಿಯಾವುಲ್ಲಾ, ಎಲ್ಲ ಡಿಸಿಸಿ ಬ್ಯಾಂಕ್ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅಧ್ಯಕ್ಷರುಗಳು ಮತ್ತು ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.