ಬೆಂಗಳೂರು: ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ದುರುಪಯೋಗ ಪ್ರಕರಣ ಆರೋಪದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರನ್ನು ಅಮಾನತು ಮಾಡಿರುವುದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ತಮ್ಮನ್ನು ಸೇವೆಯಿಂದ ಅಮಾನತುಪಡಿಸಿ ಸರ್ಕಾರ ಹೊರಡಿಸಿದ ಆದೇಶ ರದ್ದುಪಡಿಸಲು ಕೋರಿ ಕೆ.ಶ್ರೀನಿವಾಸ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳ ಚೇಂಬರ್‌ನಲ್ಲಿ ವಿಚಾರಣೆ ನಡೆಸಿದ ನ್ಯಾ.ಜಿ.ನರೇಂದರ್ ಅವರಿದ್ದ ವಿಭಾಗೀಯ ಪೀಠ, ಈ ಸೂಚನೆ ನೀಡಿ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿತು.
ವಿಚಾರಣೆಯ ವೇಳೆ, ಮತದಾರರ ಮಾಹಿತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ತನಿಖಾಧಿಕಾರಿಗಳು ನ್ಯಾಯಾಪೀಠಕ್ಕೆ ಸಲ್ಲಿಸಿದರು. ಇದನ್ನು ಪರಿಶೀಲಿಸಿದ ಪೀಠ ಶ್ರೀನಿವಾಸ್ ಅಮಾನತು ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಅಮಾನತುಗೊಳಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ ಎಸ್.ರಂಗಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಜಿಲ್ಲಾಧಿಕಾರಿಯಾಗಿದ್ದ ಶ್ರೀನಿವಾಸ್ ಅವರು ಮಹದೇವಪುರ ವಿಧಾನಸಭಾ ಕ್ಷೇತ್ರದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದರು. ಎಸ್.ರಂಗಪ್ಪ ಅವರು ಶಿವಾಜಿನಗರ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದರು. ಈ ಇಬ್ಬರನ್ನೂ ಸೇವೆಯಿಂದ ಅಮಾನತು ಮಾಡಿ, ಇಲಾಖಾ ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗವು ನಿರ್ದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಸರ್ಕಾರವು ಇಬ್ಬರೂ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಲಿಖಿತ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ತೊರೆಯದಂತೆ ನಿರ್ಬಂಧ ವಿಧಿಸಿದೆ.
ಇದನ್ನೂ ಓದಿ: ವಿಚ್ಛೇದನ: ಎರಡು ಕಾಯಿದೆಗಳಡಿ ಪತ್ನಿ ಪರಿಹಾರ ಪಡೆಯಲು ಅರ್ಹ- ಹೈಕೋರ್ಟ್