ಬೆಂಗಳೂರು: ನಗರದ ಕೋಣನಕುಂಟೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಭೇಟಿ ನೀಡಿ ಸರ್ಕಾರಿ ಭೂಮಿ ಒತ್ತುವರಿ ಕುರಿತು ಸ್ಥಳ ಪರಿಶೀಲನೆ ನಡೆಸಿದರು. ಸರ್ಕಾರಿ ಕಾಲುವೆ, ಕುಂಟೆ ಹಾಗು ಖಾಲಿ ಜಾಗಗಳಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಳ್ಳಲು ಜಾಗ ಸಮತಟ್ಟು ಮಾಡುತ್ತಿದ್ದದನ್ನು ತಡೆದು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬೆಳಿಗ್ಗೆ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಕನಕಪುರ ಮುಖ್ಯರಸ್ತೆ ಕೋಣನಕುಂಟೆ ಸಮೀಪದ ಬಡಾವಣೆಯೊಂದಕ್ಕೆ ಸರ್ವೇ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ನಡೆಸಿದರು. ಇದರಿಂದ ಕೊಂಚ ಆತಂಕಗೊಂಡ ಅಲ್ಲಿನ ನಿವಾಸಿಗಳಿಗೆ ಜಿಲ್ಲಾಧಿಕಾರಿಗೆ ಪರಿಸ್ಥಿತಿ ಕುರಿತು ವಿವರಿಸಿದರು. ಈ ವೇಳೆ ಅವರು ಇಂದೇ ತೆರವು ಮಾಡುವುದಿಲ್ಲ ಎಂಬ ಭರವಸೆ ನೀಡಿದರು.
ಸೂಚನಾ ಫಲಕ ತೆರವು ಪ್ರಕರಣ:
ಹಿಂದಿನ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜು ಭೂ ನ್ಯಾಯಮಂಡಳಿ ಪೀಠಾಧ್ಯಕ್ಷರಾಗಿದ್ದಾಗ ಅಲ್ಲಿನ ಭೂಮಿಯನ್ನು ಸರ್ಕಾರದ ಪರ ಮಾಡಿ ಆದೇಶ ಹೊರಡಿಸಿದ್ದರು. ಅದರಂತೆ ಅಂದಿನ ಜಿಲ್ಲಾಧಿಕಾರಿ ವಿ. ಶಂಕರ್ ಭೂಮಿಯನ್ನು ಸರ್ಕಾರದ ಹೆಸರಿಗೆ ಖಾತೆ ಮಾಡಿಸಿ ಸ್ಥಳದಲ್ಲಿ ಸರ್ಕಾರಿ ಸ್ವತ್ತು ಎಂದು ಸೂಚನಾ ಫಲಕ ಅಳವಡಿಸಿದ್ದರು. ಆದ್ರೆ ಸೂಚನಾ ಫಲಕ ಕಿತ್ತುಹಾಕಿರುವ ಭೂಗಳ್ಳರು ಜಾಗ ಸಮತಟ್ಟು ಮಾಡಿ ನಿವೇಶನ ನಿರ್ಮಿಸುತ್ತಿದ್ದಾರೆ ಎಂದು ಬಂದ ಮಾಹಿತಿ ಮೇರೆಗೆ, ಹಾಲಿ ಉಪ ವಿಭಾಗಾಧಿಕಾರಿ ಡಾ.ಎಂ.ಜಿ.ಶಿವಣ್ಣ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲಿಸಿದಾದ ಫಲಕ ಇಲ್ಲದೆ ಇರುವುದು ಹಾಗೂ ಕೆಲವೆಡೆ ಮನೆಗಳನ್ನು ಕಟ್ಟುತ್ತಿರುವುದು ಗಮನಕ್ಕೆ ಬಂದಿದೆ. ಈ ವಿಚಾರವನ್ನು ಅವರು ಕೂಡಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ.
ಸರ್ಕಾರಿ ಸೂಚನಾ ಫಲಕ ಕಿತ್ತುಹಾಕಿ ಹಲವು ಕಟ್ಟಡ ನಿರ್ಮಿಸಿರುವುದು ಇಂದು ಕಂಡು ಬಂದ ಹಿನ್ನೆಲೆ ಜಿಲ್ಲಾಧಿಕಾರಿ, ಸ್ಥಳೀಯ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಭೂಮಿ ಪರಭಾರೆಯಾಗುತ್ತಿದ್ದರೆ, ಸೂಕ್ತ ಸಮಯದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ಇರುವುದಕ್ಕೆ ಗರಂ ಆದರು. ಇಂತಹ ಪ್ರಕರಣ ಮರುಕಳಿಸಿದರೆ ಮೊದಲು ಇವರುಗಳ ಮೇಲೆ ನಿರ್ದಾಕ್ಷಣ್ಯ ಕ್ರಮ ಜರುಗಿಸಿ ಎಂದು ಗುಡುಗಿದರು.
ಸರ್ವೇ ಇಲಾಖೆ ಮೇಲೆ ಕಿಡಿ:
ಸದರಿ ಜಮೀನು ತುರ್ತಾಗಿ ಸರ್ವೇ ಮಾಡಿ ಒತ್ತುವರಿ ಗುರುತಿಸಿ ಕೊಡಲು ನಿಮಗೆ ಎಷ್ಟು ಸಮಯ ಬೇಕಾಗಬಹುದು ಎಂದು ಜಿಲ್ಲಾಧಿಕಾರಿಗಳು ಸರ್ವೇ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, 15 ದಿನಗಳು ಬೇಕಾಗಬಹುದು ಎಂದು ಉತ್ತರಿಸಿದರು. ಆ ಮಾತಿಗೆ ಗರಂ ಆದ ಜಿಲ್ಲಾಧಿಕಾರಿಗಳು ನಿಮ್ಮಲ್ಲಿ ಅತ್ಯಾಧುನಿಕ ಉಪಕರಣಗಳಿವೆ, ನುರಿತ ಸಿಬ್ಬಂದಿ ಕೂಡಾ ಸಾಕಷ್ಟಿದ್ದಾರೆ. ಮೂರು ದಿನ ಸಮಯ ಕೊಡುತ್ತೇನೆ, ಅಷ್ಟರಲ್ಲಿ ವರದಿ ಕೊಡಬೇಕು ಎಂದು ತಾಕೀತು ಮಾಡಿದರು. ಅಧಿಕಾರಿಗಳು ಒಂದು ವಾರದೊಳಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಓದಿ: ಫಸ್ಟ್ ನೈಟ್ನಲ್ಲೇ ಗಂಡ ಫುಲ್ ಟೈಟ್: ಮದ್ಯದ ಅಮಲಿನಲ್ಲಿ ಪತ್ನಿಗೆ ಏಟು!
ಸದರಿ ಭೂಮಿ ಕುರಿತು ಪೂರ್ಣ ಪ್ರಮಾಣದ ದಾಖಲೆ ಕಲೆ ಹಾಕಲಾಗುತ್ತಿದೆ. ಆದರೆ ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ಪರಿಣಿತ ಭೂಗಳ್ಳರ ಕೈವಾಡ ಎನ್ನುವುದು ಅಧಿಕಾರಿಗಳಿಗೆ ಮನದಟ್ಟಾಗಿದೆ. ಸರ್ಕಾರಿ ಸೂಚನಾ ಫಲಕ ಕಿತ್ತು ಹಾಕಿ ಆ ಭೂಮಿಯಲ್ಲಿ ಅತಿಕ್ರಮ ಪ್ರವೇಶ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಮನೆ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಂದು ಉಪ ವಿಭಾಗಧಿಕಾರಿ ಹಾಗೂ ತಹಶೀಲ್ದಾರಗಳಿಗೆ ಸ್ಥಳದಲ್ಲೇ ಡಿಸಿ ಸೂಚಿಸಿದರು.