ಬೆಂಗಳೂರು: ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಮಕ್ಕಳ ಲಾಲನೆ, ಪಾಲನೆಗಾಗಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ಡೇ ಕೇರ್ ಸೆಂಟರ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಚಾಲನೆ ನೀಡಿದರು.
ಡೇ ಕೇರ್ ಸೆಂಟರ್ಅನ್ನು ಮಾದರಿ ಕೇಂದ್ರವಾಗಿ ನಿರ್ಮಿಸಲಾಗಿದೆ. ಮಕ್ಕಳಿಗೆ ಅಗತ್ಯವಾಗಿರುವ ಆಟದ ಪರಿಕರಗಳು ಮತ್ತಿತರ ಸೌಭಲ್ಯವನ್ನು ಒದಗಿಸಲಾಗಿದೆ. ಮಕ್ಕಳ ಲಾಲನೆ, ಪಾಲನೆಗೆ ಸೂಕ್ತ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಇಂತಹ ಕೇಂದ್ರಗಳು ಅಗತ್ಯವಾಗಿವೆ ಎಂದು ಸಚಿವ ಡಾ. ಕೆ.ಸುಧಾಕರ್ ಹೇಳಿದರು.
10 ವರ್ಷದವರಗೆ ಮಕ್ಕಳ ಆರೈಕೆ ಅತ್ಯಂತ ಮುಖ್ಯವಾಗಿದೆ. ಮಕ್ಕಳು ಆರೋಗ್ಯವಂತರಾಗಿದ್ದಾಗ ಭವಿಷ್ಯದಲ್ಲಿ ಸದೃಢ ಸಮಾಜ ಕಟ್ಟಲು ಸಾಧ್ಯ. ಇಂತಹ ಆಟಾಟೋಪಗಳಿಂದ ಮಕ್ಕಳ ದೈಹಿಕವಾಗಿ ಮತ್ತಷ್ಟು ಚುರುಕಾಗುತ್ತದೆ. ಸರ್ಕಾರಿ ಮಹಿಳಾ ಸಿಬ್ಬಂದಿಗೆ ನೀಡಬೇಕಾದ ಸೌಲಭ್ಯ, ಸವಲತ್ತುಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಡೇ ಕೇರ್ ಸೆಂಟರ್ನಿಂದ ಉದ್ಯೋಗದಲ್ಲಿರುವ ದಂಪತಿ ಮತ್ತು ಅದರಲ್ಲೂ ನಿರ್ದಿಷ್ಟವಾಗಿ ಹತ್ತು ವರ್ಷ ವಯೋಮಿತಿಯೊಳಗಿನ ಮಕ್ಕಳನ್ನು ಹೊಂದಿರುವ ಪಾಲಕರಿಗೆ ಅನುಕೂಲವಾಗಿದೆ. ಮಕ್ಕಳು ಸಹ ತಂದೆ – ತಾಯಿ ಜೊತೆ ಬೆರೆಯಲು, ಅವರ ಕಣ್ಗಾವಲಿನಲ್ಲಿ ಬೆಳೆಯಲು ಈ ಕೇಂದ್ರ ಸಹಕಾರಿಯಾಗಿದೆ.
ಮಹಿಳೆಯರು ಪುರುಷರಷ್ಟೇ ಸರಿಸಮಾನವಾಗಿ ಕೆಲಸ ನಿರ್ವಹಿಸಲು ಇಂತಹ ವಾತಾವರಣ ಸೂಕ್ತವಾಗಿದೆ. ಮಹಿಳೆಯರ ಉದ್ಯೋಗದ ಸ್ಥಳದಲ್ಲಿ ಮಕ್ಕಳ ಡೇಕೇರ್ ಆರಂಭಿಸಿರುವುದರಿಂದ ತಾಯಂದಿರು ನಿರಾಳವಾಗಿ ಕೆಲಸ ಮಾಡಬಹುದು ಎಂದು ಸಚಿವರು ವಿವರಿಸಿದರು.
20 ಮಕ್ಕಳ ಆರೈಕೆಗೆ ಅವಕಾಶ: ಮಧ್ಯಾಹ್ನ ಉಟದ ಸಮಯದಲ್ಲಿ ಮಕ್ಕಳ ಜೊತೆಯಲ್ಲಿ ಇರಬಹುದು. ಭೋಜನ ಸವಿದು ಮಕ್ಕಳ ಬೇಕು – ಬೇಡಗಳನ್ನು ನೋಡಿಕೊಳ್ಳಬಹುದಾಗಿದೆ. ಆರೋಗ್ಯ ಸೌಧದ ಡೇ ಕೇರ್ನಲ್ಲಿ ಗರಿಷ್ಠ 20 ಮಕ್ಕಳ ಆರೈಕೆಗೆ ಅವಕಾಶ ಕಲ್ಪಿಸಬಹುದಾಗಿದೆ. ವಿನೂತನ ಶೈಲಿಯ ನೆಲದ ಹಾಸಿಗೆ, ರಬ್ಬರ್ ಮ್ಯಾಟ್ ಅಂಬೆಗಾಲಿಡುವ ಮಕ್ಕಳಿಂದ ಪ್ರಾಥಮಿಕ ಶಾಲೆ ಪ್ರವೇಶಿಸುವ ವಿದ್ಯಾರ್ಥಿ ಹಂತದವರೆಗೆ ಉಪಚಾರಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಕ್ಕಳ ಚಟುವಟಿಕೆಗಾಗಿ ಆಟಿಕೆಗಳನ್ನು ಅಳವಡಿಸಲಾಗಿದೆ.
ಆರೋಗ್ಯ ಸೌಧದ ಐಇಸಿ ಶಿಕ್ಷಣ ವಿಭಾಗದಲ್ಲಿ ಕೆಲಸ ಮಾಡುವ ಪಾರ್ವತಿ ಮಾತನಾಡಿ, ನನ್ನ ಮಗ ಪ್ರೀತಮ್ಗೆ ಎರಡೂ ವರ್ಷ. ಪತಿ ಕೂಡ ಕೆಲಸ ಮಾಡುತ್ತಿರುವುದರಿಂದ ಮಗುವಿನ ಆರೈಕೆಗೆ ಇಲ್ಲಿ ಉತ್ತಮ ವ್ಯವಸ್ಥೆಯಿದೆ. ಮಗನಿಗೂ ಇದರಿಂದ ತುಂಬಾ ಖುಷಿಯಾಗಿದ್ದು, ಉತ್ತಮ ರೀತಿಯಲ್ಲಿ ಮಕ್ಕಳನ್ನು ಆರೈಕೆ ಮಾಡಲು ಸಾಧ್ಯವಾಗಲಿದೆ ಎಂದರು.
ಹೆಚ್ಡಬ್ಲ್ಯೂಸಿ ಕೇಂದ್ರದಲ್ಲಿ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸ್ಫೂರ್ತಿ ಮಾತನಾಡಿ, ನನ್ನ ಮಗನ ಹೆಸರು ಶೌರ್ಯ. ಆತನಿಗೆ ಈ ಕೇಂದ್ರ ಅಚ್ಚುಮೆಚ್ಚಾಗಿದೆ. ಆರೋಗ್ಯ ಸೌಧದಲ್ಲಿ ಮಹಿಳಾ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿದ್ದು, ಇಂತಹ ವಿನೂತನ ಕೇಂದ್ರ ಸ್ಥಾಪನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಆಯುಕ್ತ ಡಿ. ರಂದೀಪ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ನನಸಾದ ನಾಲ್ಕು ದಶಕಗಳ ಕನಸು: ರಾಜ್ಯ ಸರ್ಕಾರಿ ನೌಕರರ ನಿವೃತ್ತಿಯವರೆಗೂ ವಿಮಾ ಸೌಲಭ್ಯ