ಬೆಂಗಳೂರು: ಕೊರೊನಾ ಭೀತಿ, ನಿನ್ನೆ ಸುರಿದ ಮಹಾಮಳೆಯಿಂದ ಜೀವನ ಅಸ್ತವ್ಯಸ್ತವಾಗಿದ್ದರೂ ಜನರು ಇಂದು ಸಡಗರದಿಂದ ಆಯುಧ ಪೂಜೆ, ವಿಜಯದಶಮಿ ಖರೀದಿಗೆ ಮುಂದಾಗಿದ್ದಾರೆ.
ಯಶವಂತಪುರ, ಮಲ್ಲೇಶ್ವರಂನ ಮಾರುಕಟ್ಟೆಯಲ್ಲಿ ಹಿಂದಿನಂತೆ ತರಹೇವಾರಿ ಹೂ, ಹಣ್ಣುಗಳ ವ್ಯಾಪಾರ ಕಂಡು ಬಂತು. ವ್ಯಾಪಾರ ತುಸು ಕಡಿಮೆ ಕಂಡು ಬಂದರೂ, ಮಾರುಕಟ್ಟೆಗೆ ಆಗಮಿಸಿದ ಜನರು ಸಡಗರದಿಂದ ಹಬ್ಬದ ಕೊಳ್ಳುವಿಕೆಯಲ್ಲಿ ತೊಡಗಿದ್ದು ಗೋಚರಿಸಿತು.
ಈ ಹಬ್ಬದ ವಿಶೇಷವಾದ ಬೂದುಗುಂಬಳ ಕೆ.ಜಿ.ಗೆ 40 ರಿಂದ 50 ರೂ, ಸೇವಂತಿ ಹೂವು ಒಂದು ಮಾರಿಗೆ 100 ರಿಂದ 120 ರೂ, ಮಲ್ಲಿಗೆ 60 ರಿಂದ 70 ರೂ ಮೊಳ ಇತರೆ ಹೂವುಗಳ ದರ ಕೂಡ ಸಾಮಾನ್ಯ ದಿನಗಳಿಗಿಂತ ಏರಿಕೆಯಾಗಿವೆ.
ಹಣ್ಣು, ತರಕಾರಿಗಳ ವ್ಯಾಪಾರ ತುಸು ಹೆಚ್ಚಿದ್ದು, ಗ್ರಾಹಕರಿಗೇನೂ ಹೊರೆಯಾಗಿಲ್ಲ ಅಂತಾರೆ ಹಣ್ಣಿನ ವ್ಯಾಪಾರಿಗಳು. ಆದರೂ ಪ್ರತಿ ವರ್ಷಕ್ಕಿಂತ ಈ ವರ್ಷದ ಹಬ್ಬದ ಸಡಗರದ ಮೇಲೆ ಪ್ರಕೃತಿ ವಿಕೋಪದ ಕರಾಳ ಛಾಯೆ ಆವರಿಸಿದಂತಿದೆ.