ಬೆಂಗಳೂರು: ಆಹಾರ ಇಲ್ಲ, ನೀರು ಸಹ ಕೊಡುತ್ತಿಲ್ಲ, ಊರುಗಳಿಗೆ ಹೋಗಲು ಬಿಡುತ್ತಿಲ್ಲ... ಇದು ಮುಂಬಯಿನಲ್ಲಿ ಸಿಲುಕಿರುವ ಗುಲ್ಬರ್ಗ ಜಿಲ್ಲೆಯ ಕಟ್ಟಡ ಕಾರ್ಮಿಕರ ಅಳಲು.
ಹೊಟ್ಟೆಪಾಡಿಗಾಗಿ ಮುಂಬಯಿಗೆ ಬಂದು ಕೆಲಸ ಮಾಡುತ್ತಿದ್ದೇವೆ. ಈ ಕೊರೊನಾ ವೈರಸ್ ನಿಂದಾಗಿ ಕೆಲಸವಿಲ್ಲದೇ ಊಟಕ್ಕೂ ಸಮಸ್ಯೆಯಾಗಿದೆ. ಊರಿಗೆ ಹೋಗಲು ನಮ್ಮನ್ನು ಬಿಡುತ್ತಿಲ್ಲ. ಸಣ್ಣ ಸಣ್ಣ ಮಕ್ಕಳಿದ್ದಾರೆ. ನಮಗೆ ಊರಿಗೆ ಹೋಗಲು ಸಹಾಯ ಮಾಡುವಂತೆ ಮಹಿಳೆಯರು ಸೇರಿದಂತೆ ಎಲ್ಲ ಕಾರ್ಮಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಾಜ್ಯದ ಕಾರ್ಮಿಕರು ಕೆಲಸ ಅರಸಿ ಗೋವಾ, ಮುಂಬಯಿ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳ ಮತ್ತಿತರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಹೆಮ್ಮಾರಿ ಕೊರೊನಾ ವೈರಸ್ ಅವಾಂತರಕ್ಕೆ ಸಿಲುಕಿಸಿ, ಅವರಿಗೆ ಜೀವನ ನಡೆಸಲು ಆಗದಂತೆ ತುಂಬಾ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಸಿದೆ. ಇವರಿಗೆ ಊಟ ವಸತಿ ಜೊತೆಗೆ ನೀರು ಸಹ ಇವರಿಗೆ ಸಿಗದೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರು ನೀರು ತರಲು ಹೊರಗೆ ಹೋದರೆ ಲಾಠಿ ಏಟು ಮತ್ತು ಜನರಿಂದ ನಿಂದನೆಗೆ ಒಳಗಾಗಿದ್ದಾರೆ. ಆದ ಕಾರಣ ಅವರು ಕರ್ನಾಟಕಕ್ಕೆ ಬರುವುದಕ್ಕೆ ಅಂಗಲಾಚುತ್ತಿದ್ದಾರೆ. ಆದರೆ, ಯಾವುದೇ ರೀತಿಯ ಸಾರಿಗೆ ಸೌಲಭ್ಯಗಳಿಲ್ಲದ ಕಾರಣ ತುಂಬಾ ತೊಂದರೆಯಲ್ಲಿದ್ದಾರೆ.ಚಿಕ್ಕ ಚಿಕ್ಕ ಮಕ್ಕಳು ಇರುವವರು ಸೇರಿ ಸುಮಾರು 400 ರಿಂದ 500 ಕಾರ್ಮಿಕರು ಮುಂಬಯಿನಲ್ಲಿ ತಂಗಿದ್ದಾರೆ.
ಆದಕಾರಣ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಯಾವ ಯಾವ ರಾಜ್ಯಗಳಲ್ಲಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಆ ರಾಜ್ಯ ಸರ್ಕಾರದೊಂದಿಗೆ ಮಾತನಾಡಿ ಈ ಕಾರ್ಮಿಕರನ್ನು ಕರ್ನಾಟಕಕ್ಕೆ ಕರೆತರಲು ವ್ಯವಸ್ಥೆ ಮಾಡಬೇಕು. ಅವರೆಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಿ ಅವರಲ್ಲಿ ಯಾರಿಗಾದರೂ ಈ ಕೊರೊನಾ ಲಕ್ಷಣಗಳು ಕಂಡುಬಂದರೆ, ಅವರನ್ನು ಆಸ್ಪತ್ರೆಗೆ ಸೇರಿಸಿ ಸರ್ಕಾರವೇ ಸಂಪೂರ್ಣ ಜವಾಬ್ದಾರಿಯಿಂದ ಇವರನ್ನು ಕಾಪಾಡಬೇಕು ಮತ್ತು ರೋಗದ ಲಕ್ಷಣ ಇಲ್ಲದಿರುವ ಜನರನ್ನು ಅವರವರ ಊರುಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕೆಂದು ಜೆಡಿಎಸ್ ಸೇವಾದಳ ರಾಜ್ಯ ಅಧ್ಯಕ್ಷ ಬಸವರಾಜ ಪಾದಯಾತ್ರೆ ಹಾಗೂ ರಾಜ್ಯದ ಎಲ್ಲ ಸೇವಾದಳಗಳ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.