ಬೆಂಗಳೂರು : ಜನ ಬೈತಾರೆ ಅಂತ ಸರ್ಕಾರ ಮುಖ್ಯಕಾರ್ಯದರ್ಶಿಗಳ ಮೂಲಕ ಭಾಷಣ ಮಾಡಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಬ್ಬ ಸಚಿವರು ಕೂಡ ಜಿಲ್ಲೆಗಳಿಗೆ ಹೋಗಿ ಕೋವಿಡ್ ಬಗ್ಗೆ ಸಭೆ ಮಾಡಿಲ್ಲ. ಆಸ್ಪತ್ರೆಗೆ ಹೋಗಿ ಜನರ ಸಮಸ್ಯೆ ಕೇಳಿಲ್ಲ. ಅಗತ್ಯ ಸೇವೆಯ ಇಲಾಖೆಯಲ್ಲಿರುವ ಅಧಿಕಾರಿಗಳನ್ನು ಬಿಟ್ಟು ಬೇರೆ ಇಲಾಖೆ ಅಧಿಕಾರಿಗಳನ್ನು ಕೋವಿಡ್ ನಿರ್ವಹಣೆಗೆ ಬಳಕೆ ಮಾಡೋಕೆ ಏನಾಗಿದೆ ಸರ್ಕಾರಕ್ಕೆ? ಸರ್ಕಾರದ ವೈಫಲ್ಯಗಳನ್ನು ನಿನ್ನೆ ರಾಜ್ಯಪಾಲರ ಮುಂದೆ ಹೇಳಿದ್ದೆ. ಖರ್ಗೆ ಅವರು ಹೇಳಿದ ಹಾಗೆ ಪ್ರಧಾನಿ ಪ್ರವಚನ ಮಾಡಿದ್ದಾರೆ.
ಇದು ಗವರ್ನರ್ ರೂಲ್ ಅಂತ ನಮ್ಮ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಧಾನಿ ಹೇಳಿದ ತಕ್ಷಣ ಕಾನೂನು ಬದಲಾವಣೆ ಮಾಡೋಕೆ ಆಗುತ್ತಾ? ನಾವು ರಾಜಕಾರಣ ಮಾಡಬಾರದು ಅಂತ ಸುಮ್ಮನೆ ಇದ್ದೇವೆ. ಇದು ಸರ್ಕಾರದ ಸಂಪೂರ್ಣ ವೈಫಲ್ಯ. ಬೆಡ್ಗಳು, ಆಕ್ಸಿಜನ್ ಕೊರತೆ ಸಾಕಷ್ಟು ಕಾಡ್ತಿದೆ ಎಂದರು.
ಮಾರ್ಗಸೂಚಿಗಳನ್ನು ಪಾಲಿಸಿ : ತಜ್ಞರ ಸಮಿತಿ ಅಭಿಪ್ರಾಯದಂತೆ ಹೋಗಬೇಕು ಎಂದು ನಾವು ಅಭಿಪ್ರಾಯ ಪಟ್ಟಿದ್ದೆವು. ಲಾಕ್ಡೌನ್ ಮಾಡಿ ಅಂತ ಅವರ ಚಿಂತನೆ ಇತ್ತು ಅಂತ ಕಾಣುತ್ತೆ. ಪ್ರಧಾನಿ ಕೊಟ್ಟ ಸಲಹೆಯಂತೆ ಅವರು ಲಾಕ್ಡೌನ್ ಮಾಡಿಲ್ಲ. ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಜನ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನಲ್ಲೇ ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಅಂತ್ಯಸಂಸ್ಕಾರ ಮಾಡುವುದಕ್ಕೂ ಸರ್ಕಾರ ವಿಫಲವಾಗಿದೆ. ಬೆಂಗಳೂರು ಆಚೆ ಹತ್ತು ಎಕರೆ ಜಾಗ ಗುರುತಿಸಿ, ಅಲ್ಲಿ ಕಟ್ಟಿಗೆ ವ್ಯವಸ್ಥೆ ಮಾಡಿ, ಗೌರವಯುತವಾಗಿ ಕಳುಹಿಸಬೇಕು. ಅದು ಕೂಡ ಮಾಡುವ ಸಾಮಾನ್ಯ ಜ್ಞಾನ ಕೂಡ ಇಲ್ಲ ಈ ಸರ್ಕಾರಕ್ಕೆ.
ಸುರೇಶ್ ಅಂಗಡಿ ಸಾವಾದಾಗ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಮನೆಯವರು ಮುಖ ನೋಡದ ಹಾಗೆ ಮಾಡಿಬಿಟ್ರು. ಇಷ್ಟು ದಿನ ಮಾತನಾಡುವುದು ಬೇಡ ಅಂದುಕೊಂಡಿದ್ದೆ. ಆದ್ರೆ, ಇವತ್ತಿನ ಪರಿಸ್ಥಿತಿ ನೋಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅನಿಸುತ್ತಿದೆ ಅಂತ ಕಿಡಿಕಾರಿದರು.
ಇದನ್ನೂ ಓದಿ: ಕೊಡಗಿನಲ್ಲಿ ಕೋವಿಡ್ ಸೋಂಕಿಗೆ ವೃದ್ಧೆ ಬಲಿ
ಕಮಿಟಿ ಸಲಹೆಯಂತೆ ನಡೆದುಕೊಳ್ಳಿ ಎಂದು ನಾವು ಸರ್ಕಾರದ ಮುಂದೆ ನಮ್ಮ ಅನಿಸಿಕೆ ಹೇಳಿದ್ದೆವು. ಲಾಕ್ಡೌನ್ ಮಾಡಬೇಕು ಅಂತ ಅವರ ಚಿಂತನೆ ಇತ್ತು. ನಿನ್ನೆ ಪ್ರಧಾನಿ ಸಂದೇಶದ ಮೇಲೆ ಕೆಲ ಬದಲಾವಣೆ ಮಾಡಿದ್ದಾರೆ. ಎಲ್ಲಾ ಜನರು ಸಹಕಾರ ಕೊಡಬೇಕು. ಸರ್ಕಾರದ ವೈಫಲ್ಯ ರಾಜ್ಯಪಾಲರ ಮುಂದೆ ಹೇಳಿದ್ದೇವೆ.
ಜನರಿಗೆ ಮಾತು ಕೊಟ್ಟಿದ್ದನ್ನು ಈಡೇರಿಸಿಲ್ಲ, ಅದನ್ನೆಲ್ಲಾ ಹೇಳಿದ್ದೇವೆ. ಪ್ರಧಾನಿ ಟ್ಯಾಕ್ಸ್ ಕಡಿಮೆ ಮಾಡಿದ್ದೇವೆ ಎಂದು ಹೇಳಿದ್ದಾರೆ, ಮೊದಲು ಯಾಕೆ ಹೇಳಲಿಲ್ಲ. ಮೊದಲು ನಮ್ಮ ಜನರಿಗೆ ಸಹಾಯ ಮಾಡಬೇಕಿತ್ತು. ಅದು ಬಿಟ್ಟು ನೀವು ಹೊರ ದೇಶಕ್ಕೆ ವ್ಯಾಕ್ಸಿನ್ ಕಳಿಸಿದ್ದೀರಾ? ಎಂದು ಕಿಡಿಕಾರಿದರು.
ಡಬಲ್ ಎಂಜಿನ್ ಸರ್ಕಾರ : ಇವರಿಗೆ ಜನರು ಬೈಯುತ್ತಾರೆ ಎಂದು ಕಾರ್ಯದರ್ಶಿಗಳ ಮೂಲಕ ಭಾಷಣ ಮಾಡಿಸಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಏನು ಮಾಡ್ತಿದೆ. ಪ್ರಧಾನಿ ವ್ಯಾಕ್ಸಿನ್ ಹೆಚ್ಚು ಮಾಡಿದ್ದೇವೆ ಎಂದು ಹೇಳಿದ್ರು. ಎಲ್ಲಿ ಮಾಡಿದ್ದಾರೆ? ನನಗೆ ದಿನಕ್ಕೆ ನೂರು ಕರೆಗಳು ಬರುತ್ತಿವೆ. ಎಲ್ಲೂ ವ್ಯವಸ್ಥೆ ಸರಿಯಾಗಿ ಮಾಡುವುದಕ್ಕೆ ಆಗ್ತಿಲ್ಲ.
ಮಾಧ್ಯಮಗಳು ಜನರಿಗೆ ಭಯ ಉಂಟು ಮಾಡಬೇಡಿ, ಸರ್ಕಾರ ಫೇಲ್ ಆಗಿದೆ. ಪ್ರಿಯಾಂಕಾ ಗಾಂಧಿ ತುಂಬಾ ಚೆನ್ನಾಗಿ ಮಾತಾಡಿದ್ದಾರೆ. ಜನ ಅಳುತ್ತಿದ್ದಾರೆ, ನೀವು ಬಂಗಾಳದಲ್ಲಿ ಹೋಗಿ ನಗ್ತಿದ್ದೀರಾ ಅಂತ. ಕೋವಿಡ್ ವಿಚಾರದಲ್ಲಿ ಯಾವುದಾದ್ರೂ ಸಚಿವ ಭೇಟಿ ಕೊಟ್ಟಿದ್ದಾರಾ? ಜಿಲ್ಲೆಗಳಲ್ಲಿ ಆಸ್ಪತ್ರೆಗೆ ಹೋಗಿ ಏನಾದ್ರೂ ಭೇಟಿ ಕೊಟ್ಟಿದ್ದಾರಾ? ಸಚಿವರು ಏನ್ ಮಾಡ್ತಿದ್ದಾರೆ? ಆಸ್ಪತ್ರೆ ವ್ಯವಸ್ಥೆ ಹೋಗಿ ಏನಾದ್ರೂ ನೋಡಿದ್ದಾರಾ? 250 ಜನ ಐಎಎಸ್, 500 ಜನ ಕೆಎಎಸ್ ಅಧಿಕಾರಿಗಳು ಏನ್ ಮಾಡ್ತಿದ್ದಾರೆ? ಎಂದು ಪ್ರಶ್ನಿಸಿದರು.