ಬೆಂಗಳೂರು/ಕೆಆರ್ ಪುರ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಧ್ಯರಾತ್ರಿ ಕೆಆರ್‌ಪುರಂ ಮಾರುಕಟ್ಟೆಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಬೆಂಗಳೂರು ಹೊರವಲಯದ ಹೊಸಕೋಟೆ, ಕೋಲಾರ, ಮಾಲೂರು, ಚಿಂತಾಮಣಿ, ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತಿತರ ಕಡೆಯ ರೈತರು ತಾವು ಬೆಳೆದ ತರಕಾರಿ, ಹಣ್ಣು, ಹೂವು ಉತ್ಪನ್ನಗಳನ್ನು ತಂದು ಮಾರಾಟ ಮಾಡಲು ಅವಕಾಶ ನೀಡದೆ, ರೈತರ ವಾಹನಗಳನ್ನು ತಡೆದು ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ಕೆಆರ್‌ಪುರಂ ಮಾರುಕಟ್ಟೆ ಸಮೀಪ ಶುಕ್ರವಾರ ಮಧ್ಯರಾತ್ರಿ 12.15 ಗಂಟೆ ಸುಮಾರಿಗೆ ಯಾರಿಗೂ ತಿಳಿಸದೆ ಮಾರುಕಟ್ಟೆಗೆ ಡಿ ಕೆ ಶಿವಕುಮಾರ್ ಭೇಟಿ ನೀಡಿದ್ದರು.
ಈ ವೇಳೆ ರೈತರ ಸಮಸ್ಯೆಗಳನ್ನ ಆಲಿಸಿದ ಡಿಕೆಶಿ, ರೈತರ ವ್ಯಾಪಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಅವರಿಗೆ ನೆರವಾಗುವಂತೆ ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿಕೆಶಿ, ಅನೇಕ ರೈತರು ತಮಗಾಗುತ್ತಿರುವ ತೊಂದರೆ ಬಗ್ಗೆ ತಮಗೆ ದೂರವಾಣಿ ಕರೆ ಮಾಡಿ ನಿವೇದಿಸಿಕೊಂಡಿದ್ದರು. ಆದ್ದರಿಂದ ರೈತರನ್ನು ಭೇಟಿ ಮಾಡಲು ಎಂಎಲ್ಸಿ ನಾರಾಯಣ ಸ್ವಾಮಿ ಹಾಗೂ ಹೊಸಕೋಟೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾರಾಯಣಗೌಡ ಜತೆಗೆ ಬಂದಿರುವುದಾಗಿ ಹೇಳಿದರು.