ಬೆಂಗಳೂರು: ಮೈತ್ರಿ ಸರ್ಕಾರ ಬಿದ್ದ ವಿಚಾರ ಮುಗಿದ ಅಧ್ಯಾಯ. ಮುಗಿದ ಅಧ್ಯಾಯದ ಬಗ್ಗೆ ಚರ್ಚಿಸಲು ಆಸಕ್ತಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಬೆಳಗಾವಿ, ಗೋಕಾಕ್ನ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಅವರನ್ನು ಭೇಟಿ ಮಾಡಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ನಮ್ಮದೇನಿದ್ದರೂ ಮುಂದೆ ಅಧಿಕಾರಕ್ಕೆ ಬರೋಕೆ ಏನು ಮಾಡಬೇಕು. ಜನರಿಗೆ ಹೇಗೆ ಒಳ್ಳೆಯದು ಮಾಡಬೇಕು ಅನ್ನೋದಷ್ಟೆ. ಹಾಗಾಗಿ, ಇದರ ಬಗ್ಗೆ ಎಲ್ಲ ಮಾತನಾಡಲ್ಲ ಎಂದರು.
ಸಹಾಯ ಮಾಡುತ್ತಿದ್ದರು
ಯಾರು ಹೇಳಿದ್ದು ಡಿಸೈನ್ ಬಾಕ್ಸ್ ನನ್ನ ಸೋಶಿಯಲ್ ಮೀಡಿಯಾ ನೋಡಿಕೊಳ್ತಿದ್ದಾರೆ ಅಂತ. ಅವರು ನನಗೆ ಸಹಾಯ ಮಾಡುತ್ತಿದ್ದರು. ಅದರ ಮೇಲೆ ಐಟಿ ದಾಳಿ ಆಯ್ತು ಅಂತ ಈಗ ಗೊತ್ತಾಯ್ತು. ವಿಷಯ ತಿಳಿದು ಮಾತನಾಡುತ್ತೇನೆ. ಅವರು ಫ್ರೊಫೆಶನಲ್ ಇದಾರೆ. ಅದಕ್ಕೆ ಉತ್ತರವನ್ನು ಅವರೇ ಕೊಡ್ತಾರೆ. ನಿನ್ನೆ ನನ್ನ ಹತ್ತಿರ ಬಂದು ಮಾತನಾಡಲಿಕ್ಕೆ ಪ್ರಯತ್ನಪಟ್ಟರು. ಆದರೆ, ಆಗಲಿಲ್ಲ ಎಂದು ಡಿಕೆಶಿ ವಿವರಿಸಿದರು.
ಗೋಕಾಕ್ನಲ್ಲಿ ಕಾಂಗ್ರೆಸ್ ಗೆಲ್ಲಲಿದೆ
ಡಿಕೆಶಿ ಭೇಟಿ ಬಳಿಕ ಅಶೋಕ್ ಪೂಜಾರಿ ಮಾತನಾಡಿದರು. ನಿನ್ನೆ ಸೌಹಾರ್ದವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದೆ. ಇವತ್ತು ಕೆಪಿಸಿಸಿ ಅಧ್ಯಕ್ಷರ ಭೇಟಿ ಮಾಡಿದ್ದೇನೆ. ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದೆ. ಸತೀಶ್ ಜಾರಕಿಹೊಳಿ ಮನೆಗೆ ಬಂದು ಕೆಲಸ ಮಾಡುವಂತೆ ಮನವಿ ಮಾಡಿದ್ರು. ಸತೀಶ್ ಮತ್ತು ನಮ್ಮ ಆಶಯ ಒಂದೇ ಇದೆ ಎಂದರು.
ಗೋಕಾಕ್ನಲ್ಲಿ ದುಷ್ಟ ಶಕ್ತಿಗಳನ್ನು ದಮನ ಮಾಡಬೇಕು ಅಂತ ಬಿಜೆಪಿಯಲ್ಲಿ ಇದ್ದು ಹೋರಾಟ ಮಾಡ್ತಾ ಇದ್ದೆ. ಆದರೆ, ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಂದರು. ಹಾಗಾಗಿ, ಜೆಡಿಎಸ್ ಸೇರ್ಪಡೆಯಾದೆ. ಈಗಲೂ ಜೆಡಿಎಸ್ನಲ್ಲಿ ಇದ್ದೇನೆ. ಯಾವುದೇ ಆಮಿಷಕ್ಕೆ ನಾನು ಒಳಗಾಗಿಲ್ಲ. ಒಳಗಾಗಿದ್ರೆ ಬಿಜೆಪಿಯಲ್ಲಿ ಇದ್ದು ನಿಗಮ ಮಂಡಳಿ ಅಧ್ಯಕ್ಷ ಆಗ್ತಾ ಇದ್ದೆ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ವಿರುದ್ಧ ಹೋರಾಟ ಮಾಡಲು ಚುನಾವಣೆಗೆ ನಿಂತೆ. ಈಗ ಸತೀಶ್ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದಾರೆ. ನಮ್ಮ ಮತ್ತು ಸತೀಶ್ ಉದ್ದೇಶ ಒಂದೇ ಆಗಿದೆ. ಹಾಗಾಗಿ, ಮುಂದಿನ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಗೆಲ್ಲುವ ವಾತಾವರಣ ರೆಡಿ ಮಾಡುತ್ತೇವೆ ಎಂದರು.
ಓದಿ: ವಿಶ್ವಪ್ರಿಯ ಫೈನಾನ್ಸ್ ವಂಚನೆ ಪ್ರಕರಣ : ತನಿಖೆ ಜವಾಬ್ದಾರಿ ಸಿಐಡಿಗೆ