ಬೆಂಗಳೂರು: ನನ್ನ ಪ್ರಾಣ ಹೋದ್ರೂ ಚಿಂತೆ ಇಲ್ಲ, ಕುಡಿಯುವ ನೀರಿಗಾಗಿ ಹೋರಾಟ ಬಿಡಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯದ ಜನರಿಗಾಗಿ ನಮ್ಮ ಹೋರಾಟ. ಮೇಕೆದಾಟು ಯೋಜನೆಗೆ ನಾವು ಡಿಪಿಆರ್ ಮಾಡಿದ್ದು, ಕೇಂದ್ರ ಸಹ ಪರ್ಮಿಷನ್ ಕೊಟ್ಟಿದೆ. ಪರಿಸರ ಇಲಾಖೆ ಪರ್ಮಿಷನ್ ಕೊಡಬೇಕು. ಆದರೆ, ನೀವು ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ. ರಾಮನಗರದಲ್ಲಿ ಹೋಟೆಲ್ ಮುಚ್ಚಿಸಿದ್ದಾರೆ. ಅಲ್ಲಿನ ಜನ ಏನಾಗಬೇಕು?. ಎಷ್ಟು ಲಾಸ್ ಆಗಲಿದೆ. ಈ ದೇಶವನ್ನು ಹಾಳು ಮಾಡ್ತಿದ್ದೀರಾ? ಇದನ್ನು ಖಂಡಿಸಿ, ನಮ್ಮ ಹೋರಾಟ ಮುಂದುವರೆಯುತ್ತೆ ಎಂದರು.
ರಾಜ್ಯ ಸರ್ಕಾರ ಕೋವಿಡ್ ವಿಚಾರದಲ್ಲಿ ನಂಬರ್ಗಳನ್ನು ಹೆಚ್ಚಿಸಿ ನಿರ್ಬಂಧಗಳನ್ನು ತಂದಿದ್ದಾರೆ. ಚುನಾವಣೆಯ ಸೋಲಿನಿಂದ ನಮ್ಮ ಪಾದಯಾತ್ರೆ ತಡೆಯಲು ಹೊರಟಿದ್ದಾರೆ. ವಿದೇಶದಲ್ಲಿ ಯಾವುದೇ ವಹಿವಾಟುಗಳು ನಿಲ್ಲಿಸಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಕರ್ಪ್ಯೂ ತಂದಿದ್ದಾರೆ. ಈ ಮೂಲಕ ವರ್ತಕರು, ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದಾರೆ. ನಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಬೇಕೆಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ದೂರಿದರು.
ರಾಮನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ನಿರ್ಬಂಧ ಹೇರಿದ್ದಾರೆ. ಇದು ಒಮಿಕ್ರಾನ್ ಅಲ್ಲ ಬಿಜೆಪಿ ಕಾಯಿಲೆ ಇದು. 15 ದಿನಗಳ ಹಿಂದೆಯೇ ರಾಮನಗರ ಜಿಲ್ಲೆಯಲ್ಲಿ ಹೋಟೆಲ್‌ಗಳನ್ನು ರಿಸರ್ವ್ ಮಾಡಿದ್ದೆವು. ಸಂಗಮದಲ್ಲಿ ಹೋಟೆಲ್‌ಗಳನ್ನು ಬುಕ್ ಮಾಡಿದ್ದೆವು. ಈಗ ಅವರನ್ನು ಹೆದರಿಸಿ ಹೋಟೆಲ್ ಮುಚ್ಚಿಸುತ್ತಿದ್ದಾರೆ. ಹೋಟೆಲ್ ನೀಡಿಲ್ಲ ಅಂದ್ರೂ ಪ್ರಕೃತಿಯಲ್ಲಿ ಮಲಗ್ತೇವೆ. 5 ಸಾವಿರ ಹಾಸಿಗೆಗಳನ್ನು ಬುಕ್ ಮಾಡಿದ್ದೇವೆ ಎಂದು ಹೇಳಿದರು.
'ಹೆಚ್‌ಡಿಕೆ ನಮ್ಮ ಅಣ್ಣ ಅಲ್ವಾ, ಅವರ ಮೇಲೆ ಕೈ ಮಾಡೋಕೆ ಆಗುತ್ತಾ?'
ಕುಮಾರಸ್ವಾಮಿ ಆರೋಪಕ್ಕೆ ವ್ಯಂಗ್ಯವಾಡಿದ ಡಿಕೆಶಿ, ದಿನವಿಡೀ ಟಾಂಗ್ ಕೊಡ್ತಾ ಇರಲಿ. ನಮ್ಮ ಸುದ್ದಿ ಮಾತನಾಡುತ್ತಾ ಇರಬೇಕು ಅವರು. ಅವರು ನಮ್ಮ ಅಣ್ಣ ಅಲ್ವಾ?. ಅಣ್ಣನ ಮೇಲೆ ಕೈ ಮಾಡೋಕೆ ಆಗುತ್ತಾ? ಅಣ್ಣನನ್ನು ಹೊಡಿಯೋಕೆ ಆಗುತ್ತಾ? ಅವರು ನಮ್ಮ ಬ್ರದರ್. ದೊಡ್ಡೋರ್ ಚಿಕ್ಕವರನ್ನು ಹೊಡೀಬಹುದು. ಚಿಕ್ಕವರು ದೊಡ್ಡೋರ್ನ ಹೊಡೀಬಾರ್ದು. ಅವರ ಮೇಲೆ ಪ್ರೀತಿ ಇದೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಪರಿಶಿಷ್ಟ ಪಂಗಡಕ್ಕಾಗಿ ಉತ್ತಮ ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ: ಶ್ರೀರಾಮುಲು