ಬೆಂಗಳೂರು: ರಾಷ್ಟ್ರಮಟ್ಟದ ಒಬ್ಬ ರೈತ ನಾಯಕನಿಗೆ ರಾಜ್ಯದಲ್ಲಿ ದೊಡ್ಡ ಅವಮಾನ ಆಗಿದೆ. ಇದು ಅಕ್ಷಮ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಘಟನೆಯನ್ನು ಖಂಡಿಸಿದ್ದಾರೆ. ರೈತರ ಹೋರಾಟ ಇಂದು-ನಿನ್ನೆಯದಲ್ಲ. ಸಾಕಷ್ಟು ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ಟಿಕಾಯತ್ ಮೇಲೆ ನಡೆದಿರುವ ಹಲ್ಲೆ ಪೂರ್ವನಿಯೋಜಿತ ಕೃತ್ಯ. ಈಗಾಗಲೇ ಕಿಡಿಗೇಡಿಗಳ ಬಂಧನವಾಗಿದ್ದು, ಅವರ ವಿರುದ್ಧ ಸೂಕ್ತಕ್ರಮ ಆಗಬೇಕಿದೆ ಎಂದು ಡಿಕೆಶಿ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸುತ್ತಿರುವ ವೇಳೆ ಹಲ್ಲೆಗೊಳಗಾಗಿ ಅವಮಾನಿತರಾಗಿರುವ ರಾಕೇಶ್ ಟಿಕಾಯತ್ ಸೇರಿದಂತೆ ಎಲ್ಲ ನಾಯಕರ ಪರವಾಗಿ ನಾವು ನಿಲ್ಲುತ್ತೇವೆ. ಅವರ ನೋವಿನಲ್ಲಿ ನಾವು ಭಾಗಿಯಾಗಿದ್ದು, ಅವರ ಹೋರಾಟಕ್ಕೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಅವರಿಗೆ ಆಗಿರುವ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಮಾಧ್ಯಮಗೋಷ್ಟಿ ನಡೆಸಿ ಘೋಷಿಸಿದರು.
ರಾಜ್ಯ ಸರ್ಕಾರದಲ್ಲಿ ಆಗಿರುವ ಹಲವು ವಿಧದ ಭ್ರಷ್ಟಾಚಾರಗಳನ್ನು ಬೇರೆಡೆ ಪರಿವರ್ತಿಸಲು ಇಂತಹ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಸರ್ಕಾರದ ಹೇಳಿಕೆಗಳು ಹಾಗೂ ನಡವಳಿಕೆಗಳು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಿಕೊಳ್ಳುವ ಯತ್ನದ ಭಾಗವೇ ಆಗಿದೆ. ಕಾಂಗ್ರೆಸ್ನ ತೀವ್ರತರನಾದ ಹೋರಾಟ ಮಾಡುತ್ತಿದ್ದು, ಇಂತಹ ಘಟನೆಗಳ ಮೂಲಕ ಎಲ್ಲವನ್ನೂ ಮರೆಮಾಚುವುದನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ನಾವು ಸಹ ಸೂಕ್ತ ಸಮಯಕ್ಕೆ ಸರಿಯಾದ ಉತ್ತರ ನೀಡುತ್ತೇವೆ. ಘಟನೆಯ ವಿಡಿಯೋ ದಾಖಲೆ ಇದೆ. ಎಲ್ಲವೂ ಪ್ರತ್ಯಕ್ಷವಾಗಿದ್ದು, ಇದರ ವಿರುದ್ಧ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ನಾವು ಸಹ ಕಾದು ನೋಡುತ್ತೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಓದಿ: ಮೂಲ ಸೌಕರ್ಯ ಕೊರತೆ : ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರ ನಿರ್ಧಾರ