ಬೆಂಗಳೂರು: ಜ್ಞಾನ ಹಾಗೂ ಪರಿಶ್ರಮದಿಂದ ದೇಶ ಕಟ್ಟಬೇಕೇ ಹೊರತು, ಭಾವನಾತ್ಮಕ ವಿಚಾರಗಳಿಂದ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ಯಾವ ರೀತಿ ಬೆಳವಣಿಗೆ ಆಗುತ್ತಿದೆ ಎಂಬ ಅರಿವು ಯುವ ಕಾಂಗ್ರೆಸ್ ನಾಯಕರಲ್ಲಿ ಮೂಡಬೇಕು. ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ನಡೆಸಿದ ಭಾಷಣ ಪ್ರತಿಯೊಬ್ಬರು ಗಮನಿಸಿದ್ದೀರಿ ಎಂದು ಭಾವಿಸುತ್ತೇನೆ ಎಂದರು.
ಕಳೆದ 75 ವರ್ಷದಲ್ಲಿ ಏನಾಗಿದೆ ಹಾಗೂ ಇತ್ತೀಚಿನ 7.5 ವರ್ಷದಲ್ಲಿ ದೇಶದಲ್ಲಿ ಏನಾಗಿದೆ ಎಂಬುದರ ಕುರಿತಾದ ಚರ್ಚೆಯಾಗುವ ಅಗತ್ಯವಿದೆ. ಈ ದೇಶದಲ್ಲಿ ನಡೆಯುತ್ತಿರುವುದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಸಂಘರ್ಷ ಅಥವಾ ಹೋರಾಟವಲ್ಲ. ಸಂವಿಧಾನದ ಪರ ಹಾಗೂ ಸಂವಿಧಾನದ ವಿರುದ್ಧ ಹೋರಾಟ ನಡೆಯುತ್ತಿದೆ. ಪ್ರಜಾಪ್ರಭುತ್ವದ ನಡೆ ಹಾಗೂ ಅದರ ನಿರ್ವಹಣೆ ವಿಚಾರದಲ್ಲಿ ಹೋರಾಟ ನಡೆಯುತ್ತಿದೆ. ಸಂವಿಧಾನವನ್ನು ಉಳಿಸಿಕೊಳ್ಳಬೇಕು ಹಾಗು ಬೆಳೆಸಬೇಕು ಎಂದರು.
ಸೋಲನ್ನ ಯಾವತ್ತೂ ಗೆಲುವು ಎಂದು ಸ್ವೀಕರಿಸಬೇಕು. ಎಲ್ಲ ಸಂದರ್ಭದಲ್ಲಿಯೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಆದರೆ, ನಮ್ಮ ಪ್ರಯತ್ನ ಹಾಗೂ ಶ್ರಮ ಗೆಲುವಿನ ಹಾದಿಗೆ ತರುತ್ತದೆ. ಇಂದಿರಾಗಾಂಧಿ ಅವರೇ ಹೇಳುವಂತೆ ಅವಕಾಶಗಳು ಯಾರಿಗೂ ಸಿಗುವುದಿಲ್ಲ. ಅದನ್ನೇ ನೀವೇ ಸೃಷ್ಟಿ ಮಾಡಿಕೊಳ್ಳಬೇಕು. ಕೆಲಸವನ್ನು ಮಾಡಿದರೆ ನಿಮ್ಮ ಜವಾಬ್ದಾರಿಯನ್ನು ನಾಯಕತ್ವ ಏನು ಸೇವಾಗುಣ ಹಾಗೂ ಮನೋಭಾವದ ಅರಿವು ಆಗುತ್ತದೆ.
ಪ್ರತಿಯೊಬ್ಬರು ಶಿಸ್ತನ್ನು ಪಾಲಿಸಬೇಕು. ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಹಮ್ಮದ್ ನಲಪಾಡ್ ಹೊಂದಿರುವ ಸಂಕಲ್ಪವನ್ನು ಆಚರಣೆಗೆ ತರುವ ಕಾರ್ಯವನ್ನು ಯುವ ಕಾಂಗ್ರೆಸ್ ನಾಯಕರು ಮಾಡಿದರೆ ಸಾಕು. ಯುವಧ್ವನಿ ಕಾರ್ಯಕ್ರಮವನ್ನು ಘೋಷಿಸುವ ಆಶಯ ಹೊಂದಿದೆ. ಆದರೆ, ದೇಶದಲ್ಲಿ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತಿರುವ ಹಿನ್ನಲೆ ಇಂದು ಘೋಷಣೆ ಮಾಡುತ್ತಿಲ್ಲ.
ನಿರುದ್ಯೋಗ ಸಮಸ್ಯೆಯ ವಿಚಾರವಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಿ ನಾನು ನಿಮಗೆ ಮಾರ್ಗದರ್ಶನ ನೀಡಲು ಬಯಸುತ್ತೇನೆ. ಮುಂದಿನ ಒಂದೂವರೆ ತಿಂಗಳು ಪಕ್ಷದ ಸದಸ್ಯತ್ವ ನಿರ್ಮಾಣಕ್ಕೆ ನಿಮ್ಮ ಸಮಯವನ್ನು ಮೀಸಲಿಡಿ. ಇದಾದ ನಂತರ ಅತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರರಿಂದ ಐದು ಸಾವಿರ ಕಿಲೋಮೀಟರ್ ನಷ್ಟು ನಿರುದ್ಯೋಗಿಗಳ ಪಾದಯಾತ್ರೆ ಮಾಡಿಸಿ.
ಮಾಯ ವಿಧಾನಸಭಾ ಕ್ಷೇತ್ರದ ಜಿಲ್ಲಾ ಅಥವಾ ತಾಲ್ಲೂಕು ಕೇಂದ್ರ ವ್ಯಾಪ್ತಿಯಲ್ಲಿ ನಿರುದ್ಯೋಗಿಗಳನ್ನು ಒಗ್ಗೂಡಿಸಿ ಪಾದಯಾತ್ರೆ ಮಾಡಿಸುವ ಮೂಲಕ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಿ. ಮುಂಬರುವ ದಿನಗಳು ಇವರಿಗಾಗಿ ನಾವು ಒಂದು ಪ್ರಣಾಳಿಕೆ ಬಿಡುಗಡೆ ಮಾಡುವ ಆಶಯ ಹೊಂದಿದ್ದು, ಅದಕ್ಕೂ ಸಿದ್ಧತೆ ಮಾಡಿಕೊಳ್ಳಿ ಎಂದು ಕರೆಕೊಟ್ಟರು.
ಬಿಜೆಪಿ ವಿರುದ್ಧ ಹರಿಹಾಯ್ದ ಡಿಕೆಶಿ: ದೇಶದ ಯುವಕರನ್ನು ಬೇರೆಡೆಗೆ ಕೊಂಡೊಯ್ಯುವ ಕಾರ್ಯವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಬೇಡದ ವಿಚಾರವನ್ನ ಅವರ ತಲೆಯಲ್ಲಿ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಎನ್ಇಪಿ ವಿಚಾರವಾಗಿಯೂ ದೊಡ್ಡ ಚರ್ಚೆ ನಡೆಯಬೇಕಿದೆ. ಉತ್ತರ ಪ್ರದೇಶ ಹರಿಯಾಣ ಮಧ್ಯಪ್ರದೇಶದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಆಗಿಲ್ಲ. ರಾಜ್ಯದಲ್ಲಿ ಎನ್ಇಪಿ ಜಾರಿಗೆ ತರುವ ಮೂಲಕ ದೇಶದಲ್ಲೇ ಮೊದಲ ರಾಜ್ಯವಾಗಿಸುವ ಪ್ರಯತ್ನವನ್ನು ಉನ್ನತ ಶಿಕ್ಷಣ ಸಚಿವರು ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.
ಆದರೆ, ಇದನ್ನು ಖಂಡಿಸುತ್ತೇವೆ. 2023ರಲ್ಲಿ ಕಾಂಗ್ರೆಸ್ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಎನ್ಇಪಿಯನ್ನು ಸುಟ್ಟುಹಾಕುವ ಕೆಲಸವನ್ನು ನಾವು ಮಾಡುತ್ತೇವೆ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ರಾಜ್ಯದ ಅತ್ಯುತ್ತಮ ಸಾಧಕರು ಸಿಗುತ್ತಾರೆ. ದೇಶದ ವಿವಿಧ ರಾಜ್ಯಗಳಿಗೆ ತೆರಳಿ ರಾಜ್ಯದ ಯುವಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಬಂಡವಾಳ ಹೂಡಿಕೆಗೆ ಯಾರೂ ಮುಂದೆ ಬರಲ್ಲ- ಕಳವಳ: ರಾಜ್ಯದಲ್ಲಿ ಇಂತಹ ಒಂದು ಅಹಿತಕರ ಘಟನೆಗಳು ನಡೆಯುತ್ತಿದ್ದರೆ, ಹೂಡಿಕೆದಾರರು ಬರುವುದಿಲ್ಲ. ಧರ್ಮ ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವ ಕಾರ್ಯ ಆಗುತ್ತಿದೆ. ಒಂದು ಶಾಲೆಯಲ್ಲಿ ಬಿಜಾ ಬಗ್ಗೆ ಉಂಟಾದ ಗಲಾಟೆಯನ್ನು ತಡೆಯುವ ಕಾರ್ಯವನ್ನು ಸರ್ಕಾರ ಮಾಡಬೇಕಿತ್ತು. ಆದರೆ, ಅದನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಕಾರ್ಯವನ್ನು ಕೆಲ ಸಚಿವರು ಹಾಗೂ ಬಿಜೆಪಿ ನಾಯಕರು ಮಾಡಿದ್ದಾರೆ. ಇಂಥವರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಡಿಕೆಶಿ ಕರೆಕೊಟ್ಟರು.
ಎಲ್ಲ ಯುವಕರು ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಯುವ ಕಾಂಗ್ರೆಸ್ ನಿಂದ ಒಂದಿಷ್ಟು ಕಾರ್ಯಕ್ರಮ ರೂಪಿಸಿ. ಯಾರು ಯಾರು ಗುಂಪುಗಾರಿಕೆ ಮಾಡಬೇಡಿ ಹಾಗೂ ವ್ಯಕ್ತಿಪೂಜೆ ಮಾಡಬೇಡಿ. ಕಾರ್ಯಕ್ರಮದ ಮೂಲಕ ನಿಮ್ಮನ್ನು ನೀವು ಗುರುತಿಸಿಕೊಳ್ಳಿ. ಪ್ರತಿಯೊಬ್ಬ ಯುವ ಕಾಂಗ್ರೆಸ್ ನಾಯಕರ ಗುರಿ ಒಂದೇ ಆಗಬೇಕು. ಬಿಜೆಪಿಯನ್ನು ಕಿತ್ತುಹಾಕುವುದು ಹಾಗೂ ರಾಹುಲ್ ಗಾಂಧಿಯನ್ನು ದೇಶದ ಪ್ರಧಾನಿಯಾಗಿಸುವ ಸಂಕಲ್ಪ ತೊಡಬೇಕು.
ಸದ್ಯ ಅಧಿಕಾರದ ಆಸೆಯನ್ನ ಬಿಡಿ. ಸ್ಥಳೀಯ ಸಂಸ್ಥೆಗಳನ್ನು ಸಹ ಬೆಳೆಸುವ ಹಾಗೂ ಆ ಮಟ್ಟದಲ್ಲಿ ನಾಯಕತ್ವ ರೂಡಿಸಿಕೊಳ್ಳುವ ಕಾರ್ಯ ಮಾಡಿ. ಶಾಸಕ ಹಾಗೂ ಸಂಸದ ಸ್ಥಾನಕ್ಕೆ ಟಿಕೆಟ್ ಆಕಾಂಕ್ಷಿ ಆಗುವ ಆಸೆಯನ್ನ ಕೈಬಿಡಿ. ಮೊದಲು ಪಕ್ಷ ಅನಂತರ ಅಧಿಕಾರ. ಪಕ್ಷವನ್ನು ಅಧಿಕಾರಕ್ಕೆ ತಂದರೆ ಎಲ್ಲರಿಗೂ ಅವಕಾಶ ಲಭಿಸಲಿದೆ. ಪಕ್ಷದಲ್ಲಿ ಬೆಳೆಯಲು ಎಲ್ಲ ರೀತಿಯ ಅವಕಾಶಗಳು ಇದೆ. ಸಿಗುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆಕೊಟ್ಟರು.
ಓದಿ: ‘ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಬಹುಮಾನ ನೀಡಿದ ಮುಸ್ಲಿಂ ಸಂಘಟನೆ ವಿರುದ್ಧ ದೂರು