ಬೆಂಗಳೂರು: ನಾನು ಯಾವುದೇ ತಪ್ಪು, ಅಕ್ರಮ ಮಾಡಿದ್ದರೆ ನನಗೆ ನೇಣು ಹಾಕಲಿ, ಯಾವುದೇ ಶಿಕ್ಷೆ ನೀಡಲಿ. ಅನುಭವಿಸಲು ನಾನು ಸಿದ್ಧ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು, ದೇವರು ಇರುವಾಗ ನಾನು ತನಿಖಾ ಸಂಸ್ಥೆಯ ಬಗ್ಗೆ ಮಾತನಾಡಲ್ಲ. ನಾನು ತಪ್ಪು ಮಾಡಿಲ್ಲ, ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ದ. ನನ್ನ ಸಹೋದರ, ನನ್ನ ಪತ್ತಿ ಹಾಗೂ ನನ್ನ ಮಗಳು ನೀಡಿದ ಅಫಿಡೆವಿಟ್ ತಪ್ಪಾಗಿಲ್ಲ, ನೀಡುವ ಅಗತ್ಯ ಇರಲಿಲ್ಲ. ಆದರೂ ಕೊಟ್ಟಿದೆ. ನಮ್ಮ ಅಫಿಡೆವಿಟ್, ಕೋರ್ಟ್ ಪ್ರೊಸಿಡಿಂಗ್ಸ್ ಬಗ್ಗೆ ಸಾಕಷ್ಟು ವಿಮರ್ಶಿಸಿದ್ದಾರೆ. ಅದಕ್ಕೆ ಈಗ ಉತ್ತರಿಸಲ್ಲ. ಮುಂದೆ ದಾಖಲೆ, ಸತ್ಯ ಸಮೇತ ಉತ್ತರ ನೀಡುತ್ತೇನೆ.
ನಾನು ಕೃಷಿಕನಾಗಿ ಹುಟ್ಟಿ ಬೆಳೆದೆ. ಪ್ಯಾಷನ್ ಆಗಿ ರಾಜಕೀಯ ಆಯ್ಕೆ ಮಾಡಿಕೊಂಡೆ. ನನ್ನನ್ನು ಹಲವರು ಬೆಳೆಸಿದ್ದಾರೆ. ಯಾರಿಗೂ ನಾನು ಅನ್ಯಾಯ ಮಾಡಿಲ್ಲ. ಅಧಿಕಾರ ಎಲ್ಲರಿಗೂ ಎಲ್ಲ ಅವಧಿಯಲ್ಲಿ ಸಿಗಲ್ಲ. ಡೆಸ್ಟಿನಿ ಮುಂದೆ ಯಾವುದೂ ನಿರ್ಧರಿಸಲಾಗಲ್ಲ. ನಾನು ತಾಳ್ಮೆಯಿಂದ ಹೋರಾಡುತ್ತೇನೆ. ಪಕ್ಷ ನೀಡಿದ ಜವಾಬ್ದಾರಿ ನಿಭಾಯಿಸಿಕೊಂಡು ಬಂದಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.
ಕಾರ್ಯಕರ್ತರ ದೇವಾಲಯಕ್ಕೆ ಬಂದಿದ್ದೇನೆ :
ಅಗಸ್ಟ್ 29ರಂದು ರಾತ್ರಿ 9:30ಕ್ಕೆ ಇಲ್ಲಿಂದ ದಿಲ್ಲಿಗೆ ಹೋಗಿದ್ದೆ. ಇಂದು ನೇರವಾಗಿ ಪಕ್ಷದ ಹಾಗೂ ಕಾರ್ಯಕರ್ತರ ದೇವಾಲಯಕ್ಕೆ ಬಂದಿದ್ದೇನೆ. ಮಾಧ್ಯಮಗಳು ನನ್ನ ಪರ ಹಾಗೂ ವಿರುದ್ಧವಾಗಿ ವಿಮರ್ಶಿಸಿವೆ. ನನಗೆ ಯಾಕೆ ಇಂತಹ ಸ್ಥಿತಿ ಬಂತು ಅಂತಾ ಬಹಳ ಯೋಚಿಸಿದ್ದೇನೆ. ನನಗೆ ಕಾರ್ಯಕರ್ತರು, ಮುಖಂಡರು ಅಭಿಮಾನ ಪ್ರೀತಿ ತೋರಿಸಿದ್ದಾರೆ. ಬಿಜೆಪಿಯವರೂ ಸಹಕರಿಸಿದ್ದಾರೆ. ಮಾಧ್ಯಮಗಳು ಇದನ್ನು ಸೂಕ್ತವಾಗಿ ವ್ಯಾಖ್ಯಾನಿಸಬೇಕು ಎಂದರು.
ಸೋಲು, ಗೆಲುವು ಸಹಜ: ಶಾಸಕರ ರಕ್ಷಣೆ ಹೊಸದಲ್ಲ. ಹಿಂದೆ ಪಕ್ಷ ವಹಿಸಿದ್ದ ಕೆಲಸ, ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿದ್ದೇನೆ. ಸೋಲು, ಗೆಲುವು ಸ್ವೀಕರಿಸಿದ್ದೇನೆ. ನಾನು ನನ್ನ ಕಾನ್ಶಿಯಸ್ ವಿರುದ್ಧ ಯಾವತ್ತೂ ನಡೆದುಕೊಂಡಿಲ್ಲ. ಜನರ ಪ್ರೀತಿ ನನ್ನ ಬೆನ್ನಿಗಿದೆ. ಅವರ ಋಣ ನನ್ನ ಮೇಲಿದೆ. ನನ್ನ ಕುಟುಂಬದವರ ಭೇಟಿಗೂ ಅವಕಾಶ ನೀಡಲಿಲ್ಲ. ದೇವೇಗೌಡರಿಗೂ ಅವಕಾಶ ಸಿಗಲಿಲ್ಲ. ದಿನೇಶ್, ಪರಮೇಶ್ವರ್ ಅವರು ಬೇರೆ ತೆರನಾಗಿ ಕರೆಸಿ ಭೇಟಿ ಮಾಡಿ ಹೋದರು. ಸಿದ್ದರಾಮಯ್ಯ ಅವರಿಗೂ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಹಲವಾರು ಜನ ಭೇಟಿ ಮಾಡಲು ಪ್ರಯತ್ನಿಸಿದ್ದಾರೆ ಆದರೂ ಆಗಿಲ್ಲ. ಎಲ್ಲರೂ ನನ್ನ ಬೆಂಬಕ್ಕೆ ನಿಂತಿದ್ದರು ಎಂದರು.
ಭಾವುಕರಾದ ಮಾಜಿ ಪವರ್ ಮಿನಿಸ್ಟರ್ ಡಿಕೆಶಿ: ಜನರ ಮನಸ್ಸಲ್ಲಿ ಶಿವಕುಮಾರ್ ಮೋಸ ಮಾಡಿಲ್ಲ, ತಪ್ಪು ಮಾಡಿಲ್ಲ. ತಪ್ಪೆಸಗಿದ್ದರೆ ದೇವರು, ನ್ಯಾಯಾಂಗ ವ್ಯವಸ್ಥೆ ನನ್ನನ್ನು ಶಿಕ್ಷಿಸುತ್ತದೆ. ನಾನು ನನ್ನ ತಾಯಿಗೆ ಕೇಳದೇ, ಅವರನ್ನು ನಂಬದೇ ಹೇಗೆ ಬಾಳಲಿ. ನಾನು ನನ್ನ ತಾಯಿಗೆ ಬೇನಾಮಿದಾರ. ನಾನು ಕಾನೂನನ್ನು ಪ್ರಶ್ನಿಸಲ್ಲ. ನ್ಯಾಯಾಲಯದಿಂದ ಅನ್ಯಾಯದ ತೀರ್ಪು ಬರಬಾರದು ಎಂದು ಹೇಳುತ್ತಾ ಬಂದವನು. ನನ್ನ ವಿರುದ್ಧ ಆದಾಯ ತೆರಿಗೆ, ಮನಿ ಲ್ಯಾಂಡ್ರಿಂಗ್ ಪ್ರಕರಣ ದಾಖಲಾಗಿದೆ. ಅದೆಲ್ಲಕ್ಕೂ ಉತ್ತರ ನೀಡುತ್ತೇನೆ ಎಂದರು.
ಗಿಫ್ಟ್ ಬಗ್ಗೆ ತನಿಖೆ ಆಗಲಿ: ನಾನು ಇಂಧನ ಸಚಿವನಾಗಿದ್ದಾಗ ಎಲ್ಲಾ ಶಾಸಕರಿಗೆ ಗಿಫ್ಟ್ ಕೊಟ್ಟಿದ್ದೆ. ಮೂರ್ನಾಲ್ಕು ಮಂದಿ ಬಿಟ್ಟರೆ ಉಳಿದವರೆಲ್ಲಾ ತೆಗೆದುಕೊಂಡಿದ್ದಾರೆ. 50 ಸಾವಿರ ಮೇಲ್ಪಟ್ಟ ಗಿಫ್ಟ್. ಇದರ ತನಿಖೆ ಆಗುವುದು ಬೇಡವೇ? ಕಾನೂನು ಹಾಗೂ ಸಮಯ ಎಲ್ಲಕ್ಕೂ ಸಕಾಲಕ್ಕೆ ಉತ್ತರ ಸಿಗಲಿದೆ. ನನ್ನ ಹಾಗೂ ಕುಟುಂಬದ ಸದಸ್ಯರಿಗೆ ನೀಡಿದ ಕಿರಿಕುಳಕ್ಕೆ ಸೂಕ್ತ ಉತ್ತರ ಸಿಗಲಿದೆ. ನೇರವಾಗಿ ಹೋರಾಡುತ್ತೇನೆ. ಹಿಂದಿನಿಂದ ಹೋರಾಡಲ್ಲ.
ಉದ್ದೇಶ ಪೂರ್ವಕ ಟಾರ್ಗೆಟ್: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಕೈ ನಾಯಕರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಐಟಿ, ಇಡಿ ಅಧಿಕಾರಿಗಳು ಬಿಜೆಪಿ ಕೈಗೊಂಬೆಗಳಾಗಿ ಕೇಂದ್ರ ಹೇಳಿದಂತೆ ಕೇಳುತ್ತಾರೆ. ಐಟಿ, ಇಡಿ ತನಿಖೆಗೆ ಸಹಕರಿಸಿದರೂ ಅವರನ್ನು ಬಂಧಿಸುವ ಸಂಚನ್ನು ಬಿಜೆಪಿ ಹೈಕಮಾಂಡ್ ಮಾಡಿದೆ. ಡಿಕೆಶಿ ತಾಯಿ, ಪತ್ನಿ, ಸ್ನೇಹಿತರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ರಾಜಕಾರಣದಲ್ಲಿ ರಾಜಕೀಯ ಮಾಡೋಣ. ಆದರೆ, ಈ ರೀತಿ ಮುಗಿಸಲು ಹೊರಟರೆ, ಪ್ರಜಾಪ್ರಭುತ್ವ ಎಲ್ಲಿ ಉಳಿಯುತ್ತದೆ. ಕೀಳು ಮಟ್ಟದ ರಾಜಕಾರಣ ಸಹಿಸಲು ಜನರಿಗೆ ಸಾಧ್ಯವಾಗುತ್ತಿಲ್ಲ.
ಇಂತಹ ದಾಳಿಯಿಂದ ನಮ್ಮವರ ಶಕ್ತಿ, ಉತ್ಸಾಹ, ಹೋರಾಟದ ಮನೋಭಾವ ಹೆಚ್ಚಾಗಲಿದೆ. ಇದರಿಂದ ನಮ್ಮವರನ್ನು ಗುರಿಯಾಗಿಸುವುದನ್ನು ಬಿಟ್ಟುಬಿಡಿ. ಕಾಂಗ್ರೆಸ್‌ನವರು ಒಟ್ಟಾಗಿ ಅವರ ಜತೆ ಇದ್ದೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಡಿಕೆಶಿ ಸಿಎಂ ಆಗಿದ್ದರೂ ಇಂತಹ ಸ್ವಾಗತ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಇವರ ಹೋರಾಟದಲ್ಲಿ ನಾವೆಲ್ಲಾ ಒಂದಾಗಿ ಇರುತ್ತೇವೆ ಎಂದರು.
ನಾಳೆ ಸಿದ್ದರಾಮಯ್ಯ ಕೂಡ ಡಿಕೆಶಿ ಅವರನ್ನು ನಿವಾಸದಲ್ಲಿ ಭೇಟಿಮಾಡಿ ಮಾತನಾಡಲಿದ್ದಾರೆ. ಡಿಕೆಶಿ ಬೆನ್ನಿಗೆ ಇನ್ನೊಂದು ಬಂಡೆಯಾಗಿ ಡಿ ಕೆ ಸುರೇಶ್ ನಿಂತರು. ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಇವರ ಬೆಂಬಲಕ್ಕೆ ನಿಂತು ಧೈರ್ಯ ಹೇಳಿದ್ದಾರೆ. ಕಾಂಗ್ರೆಸ್ ಇವರ ವಿಚಾರದಲ್ಲಿ ಐಕ್ಯತೆ ಪ್ರದರ್ಶಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ ಜೆ ಜಾರ್ಜ್, ಸಂಸದ ಡಿ ಕೆ ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರರು ಉಪಸ್ಥಿತರಿದ್ದರು.