ಬೆಂಗಳೂರು: ಮುಂದಿನ ಸಿಎಂ ವಿಚಾರವಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ನೀಡಿರುವ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದೇ ಸಮುದಾಯವನ್ನು ನಂಬಿಕೊಂಡರೆ ಸಿಎಂ ಆಗಲ್ಲ ಎಂಬ ಜಮೀರ್ ಅಹ್ಮದ್ ಹೇಳಿಕೆ ವಿಚಾರ ಮಾತನಾಡಿ, ಯಾವ ಜಮೀರ್, ಜಮೀರ್ಗೆಲ್ಲಾ ಉತ್ತರ ಕೊಡೊಕೆ ನಾನು ತಯಾರಿಲ್ಲ.
ಇಂತವರು ನೂರಾರು ಜನ. ಯಾರು ಏನ್ ಮಾತಾಡಿದ್ರು, ಕಾಂಗ್ರೆಸ್ ಪಾರ್ಟಿ ಟೆಕೇರ್ ಆಫ್. ಕಾಂಗ್ರೆಸ್ ಪಾರ್ಟಿ, ಕಾಂಗ್ರೆಸ್ ಲೈನ್ ನಲ್ಲೆ ಹೋಗಬೇಕು. ಪ್ರತಿಯೊಬ್ಬರೂ ಕಾಂಗ್ರೆಸ್ ಪಾರ್ಟಿ ಲೈನ್ನಲ್ಲಿ ಹೋಗಬೇಕು. ಯಾವ ರಾಜಕಾರಣ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯ ಬೇಕು ಎಂದರು.
ಸಿಎಂ ಅಭ್ಯರ್ಥಿ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಪೈಪೋಟಿ ಹಿನ್ನೆಲೆ ಪ್ರತಿಕ್ರಿಯೆ ನೀಡಿದ್ದ ಜಮೀರ್ ಅಹ್ಮದ್ ಖಾನ್, ಡಿ. ಕೆ ಶಿವಕುಮಾರ್ ಒಕ್ಕಲಿಗ ಟ್ರಂಪ್ ಕಾರ್ಡ್‌ಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ, ಮಾತನಾಡಿದ್ದ ಅವರು, ಒಂದೇ ಸಮುದಾಯವನ್ನು ನಂಬಿಕೊಂಡರೆ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಕಾರಣವಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಹೋರಾಟ ನಿರಂತರವಾಗಿರಲಿದೆ: ಸ್ವತಂತ್ರ ಉದ್ಯಾನದಲ್ಲಿ ಕಾಂಗ್ರೆಸ್ ನಾಯಕರು ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭ ಮಾತನಾಡಿದ ಅವರು, ಗಾಂಧಿ ಪರಿವಾರದ ಮೇಲೆ ಅನಗತ್ಯವಾಗಿ ಕೇಸ್ ದಾಖಲಿಸಲಾಗಿದೆ. ರಾಹುಲ್ ಗಾಂಧಿಯವರನ್ನ 50 ಗಂಟೆ ವಿಚಾರಿಸಿದ್ರು. ಏನಾಯ್ತು? ಅದರ ವಿಡಿಯೋ ಬಿಡಲಿ ನೋಡೋಣ. ಸುಳ್ಳು ಕೇಸ್ ದಾಖಲಿಸಿ ತನಿಖೆ ಮಾಡ್ತಾ ಇದಾರೆ. ಈ ಹಿಂದೆ ಅರುಣ್ ಜೇಟ್ಲಿ ಅವರೇ ಹೇಳಿರಲಿಲ್ವಾ? ಪ್ರಾಥಮಿಕ ತನಿಖೆಯಲ್ಲಾದರೂ ತಪ್ಪಿ ಕಂಡು ಬಂದಿದೆಯಾ? ಹೀಗಾಗಿ, ನಾವು ಇದನ್ನ ಖಂಡಿಸಿ ಪ್ರತಿಭಟನೆ ಮಾಡ್ತಾ ಇದ್ದೇವೆ. ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.
ಬಿಜೆಪಿಯವರಿಗೆ ಭಯವಿದೆ. ಜಿಎಸ್ಟಿ ಏರಿಕೆ, ಪಿಕ್ ಪಾಕೇಟ್ ಮಾಡಿದ್ದಾರೆ. ಶೇ 40ರಷ್ಟು ಕಮಿಷನ್ ಆರೋಪಗಳಿವೆ. ಇವುಗಳನ್ನು ಡೈವರ್ಟ್ ಮಾಡಲು ಕಿರುಕುಳ ನೀಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.
ಪೊಲೀಸರ ಮೇಲೆ ಜಂಪ್: ಇಂದು ಪ್ರತಿಭಟನೆ ಸಭೆಯ ಬಳಿಕ ರಾಜಭವನಕ್ಕೆ ಮುತ್ತಿಗೆಗೆ ಮುಂದಾದ ಕಾಂಗ್ರೆಸ್ ನಾಯಕರನ್ನು ಪೊಲೀಸರು ತಡೆದರು. ಬ್ಯಾರಿಕೇಡ್ ಅಳವಡಿಸಿ ಕಾಂಗ್ರೆಸ್ ನಾಯಕರು ರಾಜಭವನದ ಒಳಗಡೆ ತೆರಳದಂತೆ ಮಹಾರಾಣಿ ಕಾಲೇಜು ಪ್ರವೇಶದ್ವಾರದ ಮುಂಭಾಗ ಪೊಲೀಸರು ಪ್ರಯತ್ನ ನಡೆಸಿದಾಗ ಬ್ಯಾರಿಕೇಡ್ ಮೇಲೆ ಹತ್ತಿದ ಡಿ. ಕೆ ಶಿವಕುಮಾರ್, ಎದುರು ಭಾಗದಲ್ಲಿ ನಿಂತಿದ್ದ ಪೊಲೀಸರ ಮೇಲೆಯೇ ಜಂಪ್ ಮಾಡಿದರು. ಕೂಡಲೇ ಅವರನ್ನು ವಶಕ್ಕೆ ಪಡೆದ ಪೊಲೀಸರು ತಮ್ಮ ವಾಹನದಲ್ಲಿ ಕರೆದೊಯ್ದರು.
ಓದಿ: ಸೋನಿಯಾ ಗಾಂಧಿ ಋಣ ತೀರಿಸಿಲ್ಲ ಎಂದರೆ, ತಿನ್ನುವ ಅನ್ನದಲ್ಲಿ ಹುಳ ಬೀಳುತ್ತೆ: ರಮೇಶ್ ಕುಮಾರ್