ಬೆಂಗಳೂರು: ವಿಧಾನಸಭೆ ಚುನಾವಣೆಗೆ ವರ್ಷಕ್ಕೆ ಮುನ್ನವೇ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಹೊಸದಾಗಿ ನೇಮಕಗೊಂಡಿರುವ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ವಿಶೇಷ ಜವಾಬ್ದಾರಿ ಹಂಚಿಕೆ ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಈ ಸಂಬಂಧ ವಿಶೇಷ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಗೌರವಾನ್ವಿತ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅನುಮೋದನೆಯೊಂದಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ/ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ತಮಗೆ ಅಭಿನಂದನೆಗಳು. ಮುಂದಿನ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಎಲ್ಲಾ ಶಕ್ತಿಯನ್ನು ಬಳಸಿ ಈ ಚುನಾವಣೆಯನ್ನು ಗೆಲ್ಲಲೇಬೇಕಾಗಿದೆ.
ಈ ಹಿನ್ನೆಲೆ ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಿಗೆ ಜಿಲ್ಲಾ/ವಿಧಾನಸಭಾ ಕ್ಷೇತ್ರದ ಇತರ ಜವಾಬ್ದಾರಿಯನ್ನು ಇದರೊಂದಿಗೆ ಲಗತ್ತಿಸಲಾದ ಪಟ್ಟಿಯಂತೆ ಹಂಚಿಕೆ ಮಾಡಲಾಗಿದೆ. ಕೆಲವೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಇದರೊಂದಿಗೆ ಲಗತ್ತಿಸಲಾದ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ. ಅದನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು. ತಾವು ತಮ್ಮ ಸಂಪೂರ್ಣ ಸಮಯವನ್ನು ನೀಡಿ ನಿರಂತರವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಪಕ್ಷಕ್ಕಾಗಿ ಶ್ರಮಿಸಬೇಕಾಗಿ ಈ ಮೂಲಕ ಕೋರುತ್ತೇನೆ ಎಂದಿದ್ದಾರೆ.
ಆದೇಶದಲ್ಲಿ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರತ್ಯೇಕವಾಗಿ ಜಿಲ್ಲಾವಾರು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರು ಈ ಸ್ಥಳಗಳಿಗೆ ತೆರಳಿ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಸೂಚಿಸಲಾಗಿದೆ.
ಓದಿ: ಮೀಸಲಾತಿ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಮೂರು ಬಾರಿ ಮಾತು ಕೊಟ್ಟು, ತಪ್ಪಿದ್ದಾರೆ: ಜಯಮೃತ್ಯುಂಜಯಶ್ರೀ