ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ನನ್ನ ಫೋನ್ ಟ್ಯಾಪಿಂಗ್ ಆಗುತ್ತಿದೆ. ಇಲ್ಲಿಯವರೆಗೆ ಚೆನ್ನಾಗಿತ್ತು, ಇವತ್ತು ಬೆಳಗ್ಗೆಯಿಂದ ಕರೆ ಬರುತ್ತಿಲ್ಲ. ಇವತ್ತು ಇದರ ಬಗ್ಗೆ ದೂರು ಕೊಡುತ್ತೇನೆ. ಪಕ್ಷದ ಮುಖಂಡ ಸುದರ್ಶನ್ 25 ಫೋನ್ ಕರೆ ಮಾಡಿದ್ದಾರೆ. ಆದರೆ ಕರೆ ಬರುತ್ತಿಲ್ಲ ಎಂದು ತಿಳಿಸಿದರು.
ನಂಜನಗೂಡು ಪ್ರಭಾರಿ ವೈದ್ಯಾಧಿಕಾರಿ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವೈದ್ಯಕೀಯ ಸಿಬ್ಬಂದಿ ಪ್ರಾಣ ಒತ್ತೆ ಇಟ್ಟು ಸೇವೆ ಮಾಡುತ್ತಿದ್ದಾರೆ. ಅವರ ಸೇವೆಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಇಂದು ಪತಿಯನ್ನು ಕಳೆದುಕೊಂಡ ಹೆಣ್ಣು ಮಗಳು ಧ್ವನಿ ಎತ್ತಿದ್ದಾರೆ. ಅರೆಸ್ಟ್ ಮಾಡೋಕೆ ಎಷ್ಟು ದಿನ ಬೇಕು. ವೈದ್ಯಕೀಯ ಮಿನಿಸ್ಟರ್ ಅಲ್ಲಿ ಹೋಗಿ ನಿಂತ್ರೆ ಸಾಕಾ?. ಕೇಸ್ನ್ನು ಮುಚ್ಚಿ ಹಾಕೋ ಪ್ರಯತ್ನವೇಕೆ?. ಆರು ತಿಂಗಳಿಂದ ಆ ಅಧಿಕಾರಿಗೆ ಕಿರುಕುಳ ಆಗಿದೆ. ಕೆಲಸ ಮಾಡೋಕೆ ಸರಿಯಾಗಿ ಅವಕಾಶ ಕೊಟ್ಟಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳೋಕೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಬೇರೆ ಕೇಸಾದರೆ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಈ ಪ್ರಕರಣದಲ್ಲಿ ಯಾಕೆ ಸರ್ಕಾರ ಹಿಂದೇಟು ಹಾಕುತ್ತಿದೆ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮೊದಲು ಸಮಸ್ಯೆಗೆ ಪರಿಹಾರ ಹುಡುಕಿ. ಈಗ ಅಧಿವೇಶನ ಕರೆದಿದ್ದಾರೆ, ಅಲ್ಲಿ ಚರ್ಚೆ ಮಾಡುತ್ತೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ರು.
ನೋಟಿಸ್ ಕೊಟ್ಟು ಬೆದರಿಕೆ: ಗಲಭೆ ವಿಚಾರಣೆ ನೆಪದಲ್ಲಿ ನೋಟಿಸ್ ಕೊಟ್ಟು ಕರೆಸಿ ಬೆದರಿಸುತ್ತಿದ್ದಾರೆ. ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆಳೆಯಬೇಕು. ನೋಟಿಸ್ ಕೊಡುತ್ತೇವೆ ಎಂದರೆ ಏನು ಪ್ರಯೋಜನ ಎಂದು ಡಿಕೆಶಿ ಪ್ರಶ್ನಿಸಿದರು.