ಬೆಂಗಳೂರು : ಕಾಂಗ್ರೆಸ್ ಪಕ್ಷ ಸಂಘಟನೆಗೆ ನಾಯಕರ ಬಸ್ ಯಾತ್ರೆ ಹಿನ್ನೆಲೆ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೂತನ ಸಮಿತಿ ರಚಿಸಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಭಾಗಕಕ್ಕೆ ಎರಡು ಪ್ರತ್ಯೇಕ ಸಮಿತಿ ರಚನೆ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ಸಮನ್ವಯ ಸಮಿತಿ ನೇತೃತ್ವವನ್ನು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ವಹಿಸಿದ್ದರೆ, ದಕ್ಷಿಣ ಕರ್ನಾಟಕ ಭಾಗದ ನೇತೃತ್ವವನ್ನು ಸಂಸದ ಜೆ ಸಿ ಚಂದ್ರಶೇಖರ್ ಅವರಿಗೆ ವಹಿಸಲಾಗಿದೆ.
ಸಮನ್ವಯ ಸಮಿತಿ (ಉತ್ತರ ಕರ್ನಾಟಕ) :ಈ ಭಾಗಕ್ಕೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿಗೆ ನೇತೃತ್ವ ವಹಿಸಲಾಗಿದೆ. ಜೊತೆಗೆ 22 ಸಮನ್ವಯ ಸದಸ್ಯರ ನೇಮಕ ಮಾಡಲಾಗಿದೆ. ವಿ.ಆರ್. ಸುದರ್ಶನ್, ವಿ.ಎಸ್. ಭೋಸರಾಜ್, ಪ್ರಕಾಶ್ ರಾಥೋಡ್, ಆರ್.ಬಿ. ತಿಮ್ಮಾಪೂರ್, ರವಿಕುಮಾರ್ ಪಾಟೀಲ್, ಅರವಿಂದ ಅರಳಿ ಸೇರಿದಂತೆ ಹಲವು ನಾಯಕರನ್ನು ನಿಯೋಜಿಸಲಾಗಿದೆ. ಈ ಸಮಿತಿಯಲ್ಲಿ ಮಾಜಿ ಸಂಸದರು, ವಿಧಾನ ಪರಿಷತ್ ಸದಸ್ಯರು ಕೂಡ ಇದ್ದಾರೆ.
ಸಮನ್ವಯ ಸಮಿತಿ (ದಕ್ಷಿಣ ಕರ್ನಾಟಕ) : ಉಳಿದಂತೆ ಈ ಭಾಗಕ್ಕೂ ಸಂಸದ ಜಿ ಸಿ ಚಂದ್ರಶೇಖರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ದಕ್ಷಿಣಕ್ಕೆ 29 ಸದಸ್ಯರ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಇಲ್ಲಿ ವಿಧಾನ ಪರಿಷತ್ ಉಪನಾಯಕ ಗೋವಿಂಡರಾಜ್, ಎಚ್.ಎಂ. ರೇವಣ್ಣ, ಎಸ್. ರವಿ, ಮಂಜುನಾಥ್ ಬಂಡಾರಿ, ನಜೀರ್ ಅಹದಮದ್, ಅಬ್ದುಲ್ ಜಬ್ಬಾರ್, ಎಂ. ನಾರಾಯಣಸ್ವಾಮಿ, ಧರ್ಮಸೇನಾ, ಡಾ. ತಿಮ್ಮಯ್ಯ ಸೇರಿದಂತೆ ಹಾಲಿ, ಮಾಜಿ ಎಮ್ಮೆಲ್ಸಿಗಳು, ಮಾಜಿ ಸಂಸದರು ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಸಮಿತಿಯ ಸದಸ್ಯರು ಬಸ್ ಯಾತ್ರೆಯ ಸಿದ್ಧತೆ ನೋಡಿಕೊಳ್ಳಲಿದ್ದಾರೆ.
ಜನವರಿ 11 ರಿಂದ ಕಾಂಗ್ರೆಸ್ ಪಕ್ಷದ ಬಸ್ ಯಾತ್ರೆ ಆರಂಭವಾಗಲಿದೆ. ಮಹಾತ್ಮ ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಂಗ್ರೆಸ್ನ ಪ್ರಥಮ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು. ಇಂತಹ ಐತಿಹಾಸಿಕ ಹಿನ್ನೆಲೆಯ ಬೆಳಗಾವಿಯಿಂದಲೇ ಈ ಯಾತ್ರೆ ಆರಂಭವಾಗಲಿದೆ. ಜ.14, 15ರಂದು ಸಂಕ್ರಾಂತಿ ಪ್ರಯುಕ್ತ ಯಾತ್ರೆಗೆ ವಿರಾಮವಿರಲಿದೆ. ಈ ಯಾತ್ರೆಗಾಗಿಯೇ ಪ್ರತ್ಯೇಕ ವೆಬ್ಸೈಟ್ ಸಹ ಆರಂಭಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಯಾತ್ರೆ ಒಟ್ಟು 20 ಜಿಲ್ಲೆಗಳಲ್ಲಿ ಹಾದು ಹೋಗಲಿದೆ. ಆರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಟ್ಟಾಗಿ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಕ್ಷೇತ್ರವಾರು ನಡೆಯುವ ಯಾತ್ರೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ನೇತೃತ್ವ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಯಾತ್ರೆ ನಡೆಯಲಿದೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ಯಾತ್ರೆ : ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬಿರುಸಿನ ಸಿದ್ಧತೆ ಕೈಗೊಂಡು, ಈಗಾಗಲೇ ಯಾತ್ರೆಗಳನ್ನು ಆರಂಭಿಸಿವೆ. ತಮ್ಮ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಘೋಷಣೆಯೊಂದಿಗೆ ಆತ್ಮವಿಶ್ವಾಸದಿಂದ ಹೊಸ ಹೊಸ ತಂತ್ರಗಳನ್ನು ಬಳಸಿಕೊಂಡು ಚುನಾವಣಾ ಪ್ರಚಾರದ ಆಖಾಡಕ್ಕೆ ಧುಮುಕಿವೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಬಲಾಬಲ ಈಗಿನಿಂದಲೇ ಆರಂಭವಾಗಿದ್ದು, ಯಾತ್ರೆಗಳ ಜಾತ್ರೆಗೆ ಮುಂದಾಗಿವೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಮೊದಲು ಪಂಚರತ್ನ ರಥಯಾತ್ರೆ ಆರಂಭಿಸಿದರೆ. ನಂತರ ಬಿಜೆಪಿ ಜನಸಂಕಲ್ಪ ಯಾತ್ರೆಯನ್ನು ಕೈಗೊಂಡು ತನ್ನ ಪ್ರಚಾರದಲ್ಲಿ ತೊಡಗಿದೆ. ಇತ್ತ ಕಾಂಗ್ರೆಸ್ ಪಕ್ಷ ಸಂಘಟನೆಗೆ ಮತ್ತು ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಆತ್ಮವಿಶ್ವಾಸದೊಂದಿಗೆ ಬಸ್ ಯಾತ್ರೆಯನ್ನು ಆರಂಭಿಸಲಿದೆ.
ಇದನ್ನೂ ಓದಿ : ವಿಧಾನಸಭೆ ಚುನಾವಣೆಗೆ ಸಿದ್ಧತೆ: ರಾಜ್ಯದ ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ಪ್ರವಾಸದ ಪಟ್ಟಿ ಬಿಡುಗಡೆ