ಬೆಂಗಳೂರು: ಮಂಗಳೂರಿನಲ್ಲಿ ನಿನ್ನೆ ನಡೆದ ಗೋಲಿಬಾರ್ನಲ್ಲಿ ಮೃತಪಟ್ಟ ಇಬ್ಬರ ಸಾವಿಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇರ ಹೊಣೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆಸಿದ ಗೋಲಿಬಾರ್ನಿಂದ ಅಮಾಯಕರಿಬ್ಬರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಇದರ ಸಂಪೂರ್ಣ ಹೊಣೆಯನ್ನು ಮುಖ್ಯಮಂತ್ರಿಯವರು ಮತ್ತು ಗೃಹ ಸಚಿವರು ಹೊರಬೇಕಾಗುತ್ತದೆ. ಜೊತೆಗೆ ಅವರ ಮೇಲೆ ಕೇಸ್ ಸಹ ದಾಖಲಿಸಬೇಕಾಗುತ್ತದೆ ಎಂದು ಹೇಳಿದರು.
ಯಾವುದೇ ಹೇಳಿಕೆ ಕೊಡಬೇಡಿ ಎಂದು ತಮ್ಮ ಪಕ್ಷದ ನಾಯಕರಿಗೆ ಯಡಿಯೂರಪ್ಪನವರೇ ಹೇಳಿದ್ದಾರೆ. ಈ ಎಲ್ಲಾ ಘಟನೆಗೆ ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಮಾತನಾಡಿದ್ದಾರೆ. ಈ ಘಟನೆಗೆ ಪ್ರಚೋದನೆ ನೀಡಿದ್ದು, ಬಿಜೆಪಿ ನಾಯಕರೇ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ ಎಂದರು.
ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರು ಒಂದೆರಡು ಗಂಟೆಗಳ ಕಾಲ ತಮ್ಮ ನೋವನ್ನು ತೋಡಿಕೊಂಡು ಕಿರುಚಾಟ ಮಾಡುತ್ತಿದ್ದರು. ಅದನ್ನು ಸಹಿಸಿಕೊಳ್ಳುವ ಶಕ್ತಿ ರಾಜ್ಯ ಸರ್ಕಾರಕ್ಕಿರಲಿಲ್ಲವೇ? ಎಂದು ಪ್ರಶ್ನಿಸಿದ ಅವರು, ಏಕಾಏಕಿ ಗುಂಡು ಹಾರಿಸಿ ಇಬ್ಬರು ಅಮಾಯಕರ ಸಾವಿಗೆ ಕಾರಣವಾಗಬೇಕಿತ್ತೇ ಎಂದು ಪ್ರಶ್ನಿಸಿದರು.
ರಾಜ್ಯದ ಯಾವುದೇ ಭಾಗದಲ್ಲಿ ತೀವ್ರತರಹದ ಪ್ರತಿಭಟನೆಗಳು ನಡೆದಿರಲಿಲ್ಲ. ಕಾನೂನಿಗೆ ಧಕ್ಕೆ ಉಂಟು ಮಾಡುವ ಸನ್ನಿವೇಶವೂ ಸೃಷ್ಟಿಯಾಗಿರಲಿಲ್ಲ. ಆದರೂ 144 ರ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು ಏಕೆ ಎಂದ ಅವರು. ಪೌರತ್ವ ಕಾಯ್ದೆ ಕುರಿತು ಬಿಜೆಪಿ ನಾಯಕರೇ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೂ, ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಲಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸುವವರನ್ನು ಹತ್ತಿಕ್ಕಿ ದೇಶದೆಲ್ಲೆಡೆ ಭಯದ ವಾತಾವರಣ ಸೃಷ್ಟಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಂಗಳೂರಿನಲ್ಲಿ ಉಂಟಾದ ಗಲಭೆಗೆ ಶಾಸಕ ಯು.ಟಿ. ಖಾದರ್ ಅವರು ಯಾವುದೇ ರೀತಿಯ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿಲ್ಲ. ಹಾಗೇನಾದರೂ ನೀಡಿರುವುದು ಕಂಡು ಬಂದರೆ ಯಾವ ಕ್ರಮವನ್ನಾದರೂ ತೆಗೆದುಕೊಳ್ಳಲಿ. ದೇಶದಲ್ಲಿ ಅಭದ್ರತೆ ಸೃಷ್ಟಿಸಿ, ಜಾತಿ ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸುವ ಕೃತ್ಯಗಳನ್ನು ಮುಂದುವರೆಸಿದರೆ ಕಾಂಗ್ರೆಸ್ ಕೂಡ ರಸ್ತೆಗಿಳಿದು ಪ್ರತಿಭಟನೆ ನಡೆಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಎಲ್ಲ ಧರ್ಮವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕೆನ್ನುವ ಕನಸಿನೊಂದಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನತೆಯ ಸಂವಿಧಾನವನ್ನು ರಚಿಸಿದರು. ಅವರ ಸಂವಿಧಾನದ ಆಶಯದ ಅಡಿಪಾಯದ ಕಗ್ಗೊಲೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ಅಸಂವಿಧಾನಿಕವಾದುದ್ದು ಎಂದು ಪುನರುಚ್ಚರಿಸಿದರು.
ಬ್ರಿಟಿಷರ ಕಾಲದಲ್ಲಿಯೇ ನಮಗೆ ಅಷ್ಟೊ ಇಷ್ಟೋ ಸ್ವಾತಂತ್ರ ಇತ್ತು. ಅದನ್ನು ಬಿಜೆಪಿ ನಾಯಕರು ಇಲ್ಲದಂತೆ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಜನರ ವ್ಯಕ್ತಿ ಸ್ವಾತಂತ್ರ ಹರಣಕ್ಕೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.