ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಪಾಲಿಕೆಯಿಂದ ಮೊದಲ ಸೈಕಲ್ ಪಥ ಕಾರ್ಯರೂಪಕ್ಕೆ ಬರುತ್ತಿದ್ದು, ಹೊರ ವರ್ತುಲ ರಸ್ತೆಯಲ್ಲಿನ ಕೆ ಅರ್ ಪುರಂ ಬಳಿ ನಿರ್ಮಾಣವಾಗುತ್ತಿರುವ ಸೈಕಲ್ ಪಥ ದೇಶದ ಮೊದಲ ಮೀಸಲಿರಿಸಿದ ಸೈಕಲ್ ಪಥ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.
ಕೋವಿಡ್ ಲಾಕ್ಡೌನ್ನಿಂದ ನಗರದಲ್ಲಿ ಸೈಕಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಜನರು ಆರೋಗ್ಯ ಮತ್ತು ಸಾಮಾಜಿಕ ಅಂತರದ ದೃಷ್ಟಿಯಿಂದ ಬಳಸುತ್ತಿದ್ದಾರೆ. 'ಸೈಕಲ್ ಮೇಯರ್' ಎಂದು ಬಿ.ವೈ.ಸಿ.ಎಸ್ ನೇಮಕ ಮಾಡಿರುವ ಸತ್ಯಪ್ರಕಾಶ್ ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬಹಳಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆ ಆರ್ ಪುರಂ ನಡುವೆ ಬರುವ ಯೋಜನೆ ಇದಾಗಿದ್ದು, ಮಹಾದೇವಪುರದ ಹತ್ತಿರ ಈಗಾಗಲೇ ಸವಾರರು ಬಳಸುತ್ತಿದ್ದಾರೆ. ಈಗ ಕೇವಲ 5 ಕಿ.ಮೀ. ರಸ್ತೆ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಪೂರ್ವ ಬೆಂಗಳೂರಿನಲ್ಲಿ 46 ಕಿ.ಮೀ ಪಥ ಸುಮಾರು 52 ಕೋಟಿ ವೆಚ್ಚ, ಪಶ್ಚಿಮ ಬೆಂಗಳೂರು 17 ಕಿ ಮೀ ಸುಮಾರು 27 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿವೆ.
ಇನ್ನೂ ಹಲವಾರು ಸೈಕಲ್ ಪಥಗಳ ಯೋಜನೆ ಬಿಬಿಎಂಪಿ ಕೈಗೊಳ್ಳುತ್ತಿದ್ದು, ಮುಂದಿನ ವರ್ಷಗಳಲ್ಲಿ ಸುಮಾರು 250 ಕಿ.ಮೀ ನಷ್ಟು ನಗರದ ರಸ್ತೆಗಳನ್ನು ಗುರಿತಿಸಿದೆ.
ದ್ವಿಚಕ್ರ ವಾಹನಗಳು ಟ್ರಾಫಿಕ್ ಜಾಸ್ತಿ ಇದ್ದರೆ ಈ ಪಥದಲ್ಲಿ ನುಗ್ಗಿ ಬಿಡಬಹುದು ಎಂದು ಸೈಕಲ್ ಪ್ರಿಯರು ಆತಂಕ ತೋಡಿಕೊಳ್ಳುತ್ತಿದ್ದಾರೆ. ಪಾಲಿಕೆ ಸಿಸಿಟಿವಿ ಕಣ್ಗಾವಲಿಡುವುದಾಗಿ ಈಗಾಗಲೇ ಘೋಷಿಸಿದೆ. ದಿನಬಳಕೆಗೆ ಈ ಪಥ ಉಪಯೋಗಕ್ಕೆ ಬರುವುದೆ? ಪೊಲೀಸ್ ಹಾಗೂ ಪಾಲಿಕೆ ಪಾದಚಾರಿಗಳನ್ನು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಹೇಗೆ ನಿಯಂತ್ರಿಸುವುದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ಕ್ರಮವು ಸೈಕಲ್ ಪ್ರಿಯರಿಗೆ ಸಂತೋಷ ತಂದಿದ್ದು ವಾಯು ಮಾಲಿನ್ಯವು ಸಾಕಷ್ಟು ಕಡಿಮೆಯಾಗಲಿದೆ.