ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಸೈಬರ್ ಪ್ರಕರಣಗಳು ಹೆಚ್ಚಾಗ್ತಿದೆ. ಸದ್ಯ ಸೈಬರ್ ಪೊಲೀಸ್ ಠಾಣೆಯಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಸದ್ಯಕ್ಕೆ ಯಾವುದೇ ದೂರುಗಳನ್ನು ಸ್ವೀಕಾರ ಮಾಡುತ್ತಿಲ್ಲ. ಹೀಗಾಗಿ ನಗರ ಪೊಲೀಸ್ ಆಯುಕ್ತರು ಸೈಬರ್ ಅಪರಾಧ ಪ್ರಕರಣಗಳು ನಡೆದರೆ ಅಂತಹ ದೂರುಗಳನ್ನ ಸ್ಥಳೀಯ ಪೊಲೀಸ್ ಠಾಣೆಗಳಿಗೆ ನೀಡಲು ಆದೇಶ ಹೊರಡಿಸಿದ್ದಾರೆ.
ಸದ್ಯ ಸೈಬರ್ ಠಾಣೆಗಳಲ್ಲಿ ದಾಖಲಾಗುವ ಮ್ಯಾಟ್ರಿಮೋನಿಯಲ್, ಕ್ರೆಡಿಟ್ ಕಾರ್ಡ್ ಸ್ವೈಪಿಂಗ್, ಹಣ ದುರ್ಬಳಕೆ, ಹನಿಟ್ರ್ಯಾಪ್, ಟ್ವಿಟ್ಟರ್ ಹ್ಯಾಕ್, ಇಮೇಲ್ ಹ್ಯಾಕ್ ಹಾಗೂ ಇನ್ನಿತರೆ ದೂರುಗಳ ಸಂಖ್ಯೆ ಜಾಸ್ತಿಯಾಗಿ ಸ್ಥಳೀಯ ಪೊಲೀಸರಿಗೆ ಬೇರೆ ಪ್ರಕರಣಗಳಿಗಿಂತ ಈ ಸೈಬರ್ ಅಪರಾಧ ಪ್ರಕರಣಗಳ ದೂರುಗಳ ಸಂಖ್ಯೆಯೇ ಜಾಸ್ತಿಯಾಗಿದೆ.
ಸದ್ಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಕ್ರೈಂ ಠಾಣೆಯಲ್ಲಿ 2019 ಜನವರಿಯಿಂದ ಇಲ್ಲಿಯವರೆಗೆ ಸುಮಾರು 9,999ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ ತಾಂತ್ರಿಕ ದೋಷದಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಸದ್ಯ ಯಾವುದೇ ದೂರುಗಳನ್ನ 2020ರ ವರೆಗೆ ಸೈಬರ್ ಪೊಲೀಸರು ಸ್ವೀಕಾರ ಮಾಡಲ್ಲ. ಅಲ್ಲಿಯವರೆಗೆ ಸ್ಥಳೀಯ ಪೊಲೀಸರೇ ತನಿಖೆ ನಡೆಸುವುದು ಅನಿವಾರ್ಯವಾಗಿದೆ.