ಬೆಂಗಳೂರು: ಪ್ರಸ್ತುತ ಸಂದರ್ಭದಲ್ಲಿ ಗೂಗಲ್ ಅನ್ನೋದು ಮಾಹಿತಿ, ಮನರಂಜನೆಯ ಅತ್ಯಂತ ಪ್ರಮುಖ ತಾಣ. ಸಾಮಾನ್ಯವಾಗಿ ನಾವು ಯಾವುದಾದರು ಮಾಹಿತಿ ಪಡೆಯಲು ಗೂಗಲ್ ಮೊರೆ ಹೋಗುತ್ತೇವೆ. ಅಲ್ಲಿ ಸಿಗುವ ನಂಬರ್ಗಳಿಗೆ ಕರೆಯನ್ನು ಸಹ ಮಾಡುತ್ತೇವೆ. ಅದರೆ, ಇನ್ನು ಮುಂದೆ ಈ ಬಗ್ಗೆ ಜಾಗರೂಕರಾಗಿಬೇಕು. ಯಾಕಂದ್ರೆ, ಗೂಗಲ್ ನಂಬರ್ಗಳನ್ನೇ ಬಳಸಿಕೊಂಡು ಯಾಮಾರಿಸುವ ತಂಡವೊಂದು ಕಾರ್ಯಾಚರಿಸುತ್ತಿದೆ.
ಹೌದು, ನಗರದ ಕಬ್ಬನ್ ಪೇಟೆಯ ನಿವಾಸಿ ಚಂದ್ರಕಾಂತ್ ಸವಲಾಜಿ ಎಂಬವರಿಗೂ ಇದೇ ರೀತಿಯ ವಂಚನೆ ನಡೆದಿದೆ. ಸವಲಾಜಿಯವರಿಗೆ ಡಿ ಮಾರ್ಟ್ ಸಂಬಂಧಿತ ಮಾಹಿತಿಯೊಂದು ಬೇಕಾಗಿತ್ತು. ಅದಕ್ಕಾಗಿ ಅವರು, ಕಳೆದ 20 ನೇ ತಾರೀಕಿನಂದು ಗೂಗಲ್ ಸರ್ಚ್ ಮಾಡಿ ಸಂಪರ್ಕ ಸಂಖ್ಯೆಯೊಂದನ್ನು ಪಡೆದು ಕರೆ ಮಾಡುತ್ತಾರೆ. ಆದರೆ, ಸಂದರ್ಭದಲ್ಲಿ ನಂಬರ್ ಬ್ಯುಸಿ ಬರುತ್ತಿತ್ತು. ಸ್ವಲ್ಪ ಸಮಯದ ಬಳಿಕ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಗಳು, ಡಿ ಮಾರ್ಟ್ ಓಪನ್ ಇದೆ, ನೀವು ಬರಬೇಕಾದ ಅಗತ್ಯವಿಲ್ಲ. 10 ರೂಪಾಯಿಯ ಟೋಕನ್ ಪಡೆಯಿರಿ. ಬೇಕಾಗಿರುವ ವಸ್ತುಗಳನ್ನು ಆರ್ಡರ್ ಮಾಡಿ, ನಾವೇ ಕಳಿಸಿಕೊಡ್ತೇವೆ. ಹಣ ಪಾವತಿ ಮಾಡಲು ನಿಮ್ಮ ಅಕೌಂಟ್ ಮಾಹಿತಿ ನೀಡಿ ಎಂದು ಹೇಳಿದ್ದಾರೆ.
ಇದನ್ನು ನಂಬಿದ ಚಂದ್ರಕಾಂತ್ ಸವಲಾಜಿ ಬ್ಯಾಂಕ್ ಅಕೌಂಟ್ ಮಾಹಿತಿ ನೀಡಿದ್ದರು. ಆ ಕೂಡಲೇ ಖದೀಮರು 20 ಸಾವಿರ ರೂ. ಹಣ ಡ್ರಾ ಮಾಡಿದ್ದಾರೆ. ಈ ಕುರಿತು ವಿಚಾರಿಸಲು ಚಂದ್ರಕಾಂತ್ ಮತ್ತೆ ಅದೇ ಸಂಖ್ಯೆಗೆ ಕರೆ ಮಾಡಿದ್ದರು. ಈ ವೇಳೆ ನಿಮಗೆ ಒಟಿಪಿ ಬಂದಿದೆ. ಅದನ್ನು ಕಳುಹಿಸಿ ಸರಿ ಮಾಡ್ತೀವಿ ಎಂದು ಆ ಕಡೆಯಿಂದ ಹೇಳಿದ್ದಾರೆ. ಈ ವೇಳೆ ಚಂದ್ರಕಾಂತ್ ಒಟಿಪಿ ಕೂಡ ಕೊಟ್ಟಿದ್ದರು. ಆ ಕ್ಷಣದಲ್ಲೇ ಮತ್ತೆ 20 ಸಾವಿರ ರೂ. ಖಾತೆಯಿಂದ ಡ್ರಾ ಆಗಿದೆ.
ಈ ವೇಳೆ ತಾನು ಮೋಸ ಹೋಗುತ್ತಿರುವ ವಿಚಾರ ತಿಳಿದು ಅಲರ್ಟ್ ಆದ ಚಂದ್ರಕಾಂತ್ ಸವಲಾಜಿ, ಮತ್ತೆ ಅದೇ ಸಂಖ್ಯೆಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದೆ. ಸದ್ಯ ಹಣ ಕಳೆದುಕೊಂಡಿರುವ ಚಂದ್ರಕಾಂತ್ ಅವಲಾಜಿ, ತನ್ನ ಖಾತೆಯನ್ನು ಬ್ಲಾಕ್ ಮಾಡಿದ್ದು, ಈ ಕುರಿತು ಕೇಂದ್ರ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.