ಬೆಂಗಳೂರು: ಮೊದಲು ದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ಯಾರು? ಎಷ್ಟು ಸಂದರ್ಭಗಳಲ್ಲಿ ಹಿಂದೆ ಕರ್ಫ್ಯೂ, ನಿಷೇಧಾಜ್ಞೆ ಹೇರಿಲ್ಲ? ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ವಾ? ಎಂದು ಪುಕ್ಕಲು ಸರ್ಕಾರ ಎಂದು ಟೀಕಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಷೇಧಾಜ್ಞೆ ಜಾರಿ ಇದೇನು ಮೊದಲಲ್ಲ. ಹಿಂಸಾಚಾರ ಆಗದಂತೆ ತಡೆಯಲು ನಿಷೇಧಾಜ್ಞೆ ಹೇರಲಾಗಿದೆ. ರಾಜ್ಯದಲ್ಲಿ ಹೇಡಿ, ಪುಕ್ಕಲು ಸರ್ಕಾರ ಇಲ್ಲ, ಇಲ್ಲಿನ ಯಾವ ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಂಡಿಲ್ಲ. ಯಾರಿಗೆ ಪೌರತ್ವ ಕೊಡಬೇಕು ಅಂತ ಹೇಳಲು ಕಾಂಗ್ರೆಸ್ ನವರು ಯಾರು ಎಂದು ಶಾಸಕ ಯು ಟಿ ಖಾದರ್ ವಿರುದ್ಧ ಸಚಿವ ಸಿ ಟಿ ರವಿ ವಾಗ್ದಾಳಿ ನಡೆಸಿದರು.
ಧಮ್ಕಿ ಹಾಕುವ ಕೆಲಸ ನಿಲ್ಲಿಸಿ:
ಬೆಂಕಿ ಹಾಕುವ ಮಾತಾಡಬೇಡಿ, ಖಾದರ್ ಅವರು ಓರ್ವ ಜನಪ್ರತಿನಿಧಿಯಾಗಿ ಮಾತನಾಡಲಿ ಸಚಿವ ಸಿ ಟಿ ರವಿ ಹೇಳಿದ್ರು.
ಸಿಎಎ ವಿರುದ್ಧ ಪ್ರತಿಭಟನೆ ಮಾಡೋರಿಗೆ ಸರ್ವಧರ್ಮ ದೃಷ್ಟಿಕೋನ ಇಲ್ಲ. ಸಹಬಾಳ್ವೆ ಸಂದೇಶ ಕೊಟ್ಟ ದೇಶ ಭಾರತ ಭಯ ಹುಟ್ಟಿಸುವ ಮಾನಸಿಕತೆ ಈಗ ಪ್ರತಿಭಟಿಸೋರ ಧರ್ಮದಲ್ಲಿದೆ. ಭಾರತ ಶಾಂತಿಯ ದೇಶ, ಇಲ್ಲಿರುವ ಮುಸ್ಲಿಮರು ಹುಯಿಲೆಬ್ಬಿಸುವ ಅಗತ್ಯ ಇಲ್ಲ. ಇಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ತಿಲ್ಲ ಎಂದರು.