ಬೆಂಗಳೂರು: ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ಗೆ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನೋದು ಗೊತ್ತಿಲ್ಲ. ಮೋದಿ ಅವರನ್ನು ಸರ್ವಾಧಿಕಾರಿ ಅಂತ ಹೇಳ್ತಿದ್ದೀರಾ? ನಿಮಗೆ ಏನು ನೈತಿಕತೆ ಇದೆ ಹೀಗೆ ಹೇಳಲು ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿನಲ್ಲಿ ನಿಯಮಾವಳಿ ಇರುತ್ತದೆ, ನಿಯಮಾವಳಿ ಪ್ರಕಾರ ನಡೆದುಕೊಳ್ಳುವ ಜವಾಬ್ದಾರಿ ಎಲ್ಲರದ್ದೂ ಇರುತ್ತದೆ, ನಿಯಮ ಮೀರಿ ನಡೆದುಕೊಂಡರೆ ಸಭಾಧ್ಯಕ್ಷರು ಕ್ರಮ ತೆಗೆದುಕೊಳ್ತಾರೆ. ಡಿಕೆ ಸುರೇಶ್ ಅವರಿಗೆ ನೆನಪು ಮಾಡಲಿಕ್ಕೆ ಬಯಸುವೆ. ತುರ್ತು ಪರಿಸ್ಥಿತಿ ಹೇರಿ ಹೇಗೆ ನಡೆದುಕೊಂಡ್ರು ಕಾಂಗ್ರೆಸ್ ನಾಯಕರು ಅನ್ನೋದು ಗೊತ್ತಿದೆ. ಕರ್ನಾಟಕ ಜೈಲಿನಲ್ಲೇ ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ ಜೋಶಿ ಸೇರಿದಂತೆ ಹಲವರನ್ನ ಇಲ್ಲೇ ಇಡಲಾಗಿತ್ತು. ರಾಜಕೀಯ ನಾಯಕರನ್ನ ರಾಜಕೀಯವಾಗಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ಗೆ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನೋದು ಗೊತ್ತಿಲ್ಲ. ಇದೀಗ ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಟೀಕಿಸುವ ನೈತಿಕತೆ ನಿಮಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸಭೆಯಲ್ಲಿ ಚೇರ್ಮನ್, ಲೋಕಸಭೆಯಲ್ಲಿ ಸ್ಪೀಕರ್ ಇರ್ತಾರೆ. ಅವರ ಕೆಲಸ ಅವರು ಮಾಡ್ತಾರೆ. ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಟೀಕೆಗಾಗಿ ಟೀಕೆ ಮಾಡಿದ್ದಾರೆ. ಬಿಜೆಪಿ ಮೇಲೆ ಆರೋಪ ಮಾಡಬೇಕು ಅಂತ ಏನೆಲ್ಲಾ ಆರೋಪ ಮಾಡಿದ್ದೀರ. ನೀವು ಗೆದ್ದರೆ ಜನಾದೇಶ, ಬಿಜೆಪಿ ಗೆದ್ದರೆ ಇವಿಎಂ ದೋಷ. ಸುಪ್ರೀಂ ಕೋರ್ಟೇ ಮಾನಿಟರಿಂಗ್ ಮಾಡಿ ವರದಿ ನೀಡಿದೆ. ಇವಿಎಂನಲ್ಲಿ ಲೋಪ ಇಲ್ಲ ಅಂತ, ಆದರೂ ಇಂತ ಆರೋಪ ಮಾಡುವುದನ್ನು ಮಾತ್ರ ಕಾಂಗ್ರೆಸ್ ಬಿಟ್ಟಿಲ್ಲ ಎಂದು ಟೀಕಿಸಿದರು.
ಪ್ರಧಾನಮಂತ್ರಿ ದೇಶದ ಬಗ್ಗೆ ಯೋಚನೆ ಮಾಡ್ತಿರೋ ಜನಾನುರಾಗಿ. ಕೆಲವರಿಗೆ ಪೂರ್ವಾನುಭವದ ಕೊರತೆ ಇದೆ. ಹಲವು ರೀತಿ ಟೀಕೆ ಮಾಡಿದ್ದಾರೆ. ಮೋದಿ ಇಡೀ ದೇಶ, ಎಲ್ಲಾ ರಾಜ್ಯಗಳು ಒಂದೇ ಅಂತ ತಿಳಿದವರು. ಅವರು ತಾರತಮ್ಯ ರಾಜಕೀಯದ ಮೇಲೆ ವಿಶ್ವಾಸ ಇಟ್ಟವರಲ್ಲ. ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್, ಸಕ್ ಕಾ ವಿಶ್ವಾಸ್ ಎನ್ನುವವರು. ಅವರು ತಮಿಳುನಾಡಿಗೆ ಒಂದು, ಕೇರಳಕ್ಕೆ ಒಂದು ನ್ಯಾಯ ಮಾಡಿಲ್ಲ ಎಂದರು.
ಸಿದ್ದರಾಮಯ್ಯ ಅವರು ಪ್ರಧಾನಿ ಭೇಟಿ ಮಾಡಿ ಬಂದಿದ್ದಾರೆ, ಒಳ್ಳೆಯದು. ಪ್ರಧಾನಿ ಮೊದಲಿನಿಂದಲೂ ಹಾಗೆ ಇದ್ದಾರೆ, ನೀವು ಬದಲಾಗಿ ನೋಡಿದ್ದೀರಿ ಅಷ್ಟೇ ಎಂದು ಪಿಎಂ ವಿರುದ್ಧ ಸದಾ ಟೀಕೆ ಮಾಡುವ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಸುದ್ದಿಗೋಷ್ಠಿ ಮಾಡುವಾಗ ಗೋವಿಂದ ಕಾರಜೋಳ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ತೊಂದರೆ ಮಾಡಿದ್ದು ಸರಿಯಲ್ಲ, ಅವರು ಡಿಸಿಎಂ ಆಗಿದ್ದವರು, ಹಿರಿಯ ರಾಜಕಾರಣಿ, ಸಚಿವರಾಗಿದ್ದವರು. ಅಂತವರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೀಗೆ ಮಾಡಿದ್ದಾರೆ. ಕಾಂಗ್ರೆಸ್ ಸಂಸ್ಕೃತಿ ಹೀಗೆ ಇರಬಹುದು. ಇದು ಅವರ ಪ್ರಚಾರದ ಮೂಲ ಇರಬಹುದು. ಇದನ್ನ ನಾವು ಖಂಡಿಸ್ತೇವೆ ಎಂದರು.
ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಎನ್ಐಎ ದಾಳಿ ನಡೆಸಿದೆ. ಎನ್ಐಎ ತಂಡಕ್ಕೆ ಅಭಿನಂದನೆ ಸಲ್ಲಿಸ್ತೇನೆ. ಕರ್ನಾಟಕದಲ್ಲಿ ಎರಡು ದಾಳಿ ಮೂಲಕ, ಮುಂದಾಗಬಹುದಾದ ಘಟನೆ ತಡೆದಿದ್ದೀರಿ. ಬಾಂಬ್ ಸ್ಫೋಟ ತಪ್ಪಿಸಿದ್ದೀರಿ. ಐಸಿಸ್ ಬೆಂಬಲದ ಮೂಲಕ ಖಿಲಾಫತ್ ರೀತಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಅದನ್ನ ತಪ್ಪಿಸಿರೋದಕ್ಕೆ ಎನ್ಐಎ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: 12,577.86 ಕೋಟಿ ತುರ್ತು ಬರ ಪರಿಹಾರಕ್ಕೆ ಮನವಿ