ಬೆಂಗಳೂರು: ಸಂಪುಟ ಸೇರಿಸಿಕೊಳ್ಳುವವರ ಬಗ್ಗೆ ಮೋದಿಯವರು ಹೆಚ್ಚು ರಾಜಕೀಯ ಲೆಕ್ಕಾಚಾರ ಮಾಡಲ್ಲ, ಪ್ರಾಮಾಣಿಕವಾಗಿ ಕೆಲಸ ಮಾಡೋರನ್ನು ಹುಡುಕ್ತಾರೆ. ರಾಜ್ಯದಲ್ಲಿ ಎಲ್ಲ 25 ಸಂಸದರೂ ಯೋಗ್ಯರೇ. ಆದರೆ ಯೋಗ ಯಾರಿಗೆ ಕೂಡಿ ಬರುತ್ತೋ ನೋಡೋಣ ಎಂದು ವಿಧಾನಸೌಧದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.
ಭಿನ್ನರ ವಿರುದ್ಧ ಶಿಸ್ತು ಕ್ರಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಿಸ್ತು ಕ್ರಮ ಬಗ್ಗೆ ಉಸ್ತುವಾರಿ ಅರುಣ್ ಸಿಂಗ್ ನೋಡ್ಕೋತಾರೆ. ಈ ಬಗ್ಗೆ ನಾನು ಮಾತಾಡಿ ಗೊಂದಲ ಹುಟ್ಟಿಸೋದಿಲ್ಲ ಎಂದು ಸಿಎಂ ಬಿಎಸ್ವೈ ವಿರುದ್ಧ ಯತ್ನಾಳ್ ಭ್ರಷ್ಟಾಚಾರದ ಕುರಿತು ಆರೋಪದ ಪ್ರಶ್ನೆಗೆ ಉತ್ತರ ನೀಡಿದರು.
ನಮ್ಮ ಪಕ್ಷದಲ್ಲಿ ಭ್ರಷ್ಟಾಚಾರ ಇಲ್ಲ:
ನಮ್ಮ ಪಕ್ಷದಲ್ಲಿ ಭ್ರಷ್ಟಾಚಾರ ಇಲ್ಲ, ಸರ್ಕಾರದಲ್ಲಿ ಭ್ರಷ್ಟಚಾರ ಇದೆ ಎಂಬ ಮಾತನ್ನು ನಾನು ಒಪ್ಪೋದಿಲ್ಲ ಮೋದಿಯವರು ಭ್ರಷ್ಟಾಚಾರ ಸಹಿಸಲ್ಲ ಎಂದರು. ಮೋದಿಯವರ ಆಡಳಿತದಲ್ಲಿ ಪ್ರಾಮಾಣಿಕತೆ, ಸ್ಪಷ್ಟ ಗುರಿ, ಪಾರದರ್ಶಕತೆ ಇದೆ. ಮೋದಿ ಮಾಡೆಲ್ ವಾಜಪೇಯಿಯವರ ಮಾಡೆಲ್ ನಂತರದ ಬೆಸ್ಟ್ ಮಾಡೆಲ್ ಎಂದರು.
'ಹಮಾರಾ ಕುತ್ತಾ ಹಮಾರಾ ಗಲ್ಲೀ ಮೆ ಷೇರ್ ಹೈ' ಎಂಬ ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿ, ಸಿದ್ದರಾಮಯ್ಯನವರ ಮನಸಲ್ಲಿ ಏನಿದೆಯೋ ಅದನ್ನೇ ಹೇಳಿದಾರೆ. ಸಿದ್ದರಾಮಯ್ಯನವರ ಮನಸ್ಸಿನಲ್ಲಿ ನಮ್ದೇನಿದ್ರೂ ನಮ್ ಗಲ್ಲಿಯಲ್ಲಿ ಅಂತ ಅನಿಸಿರಬಹುದು. ಹಾಗಾಗಿ ಆ ಥರ ಹೇಳಿಕೆ ಕೊಟ್ಟಿದ್ದಾರೆ. ಟೀಕೆಗಳ ಮೂಲಕ ಯಾರೂ ದೊಡ್ಡವರಾಗಲೂ ಆಗಲ್ಲ, ಒಳ್ಳೆಯವರೂ ಆಗಲ್ಲ ಎಂದರು.
KRS ಡ್ಯಾಮ್ ಬಿರುಕು ಕುರಿತ ಜಟಾಪಟಿ ವಿಚಾರ:
ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಸಚಿವರ ಹೇಳಿಕೆ ಗಮನಿಸಿದ್ದೇನೆ. ತಜ್ಞರು ಡ್ಯಾಮ್ನಲ್ಲಿ ಬಿರುಕು ಇದೆ ಅಂದ್ರೆ ಆಗ ನಾವು ನಂಬಬಹುದು. ಈ ವಿಚಾರವನ್ನು ರಾಜಕಾರಣಕ್ಕೆ ಬಳಸೋದಿಕ್ಕೆ ನಾನು ಬಯಸಲ್ಲ. ತಜ್ಞರು ಬಿರುಕಿದೆ ಅಂತ ವರದಿ ಕೊಟ್ಟರೆ ಗಂಭೀರ ವಿಷಯ. ಆಗ ನಿರ್ಲಕ್ಷ್ಯ ಮಾಡಬಾರದು. ಆ ಭಾಗದಲ್ಲಿ ಅಕ್ರಮ ಗಣಿಗಾರಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ.ಅಕ್ರಮ ಗಣಿಗಾರಿಕೆ ಇದ್ರೆ ಸರ್ಕಾರ ಕ್ರಮ ಕೈಗೊಳ್ಳುತ್ತೆ ಸರ್ಕಾರವೂ ಕ್ರಮ ಕೈಗೊಳ್ಳದಿದ್ರೆ ನ್ಯಾಯಾಲಯದ ಮುಂದೆ ಮೊಕದ್ದಮೆ ಹೂಡಲು ಅವಕಾಶ ಇದೆ ಎಂದು ಸಿ.ಟಿ ರವಿ ಹೇಳಿದ್ರು.