ಬೆಂಗಳೂರು : ಜಿಮ್‌ಗಳು ಹಾಗೂ ಸ್ವಿಮ್ಮಿಂಗ್ ಪೂಲ್ಗಳನ್ನು ತೆರೆಯಲು ರಾಜ್ಯ ಸರ್ಕಾರ ಸಿದ್ದವಿದೆ. ಆದರೆ, ಕೇಂದ್ರ ಸರ್ಕಾರದ ಅನುಮತಿಯನ್ನು ಎದುರು ನೋಡುತ್ತಿರುವುದಾಗಿ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಡೆಸಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಮ್‌ಗಳು, ಸ್ವಿಮ್ಮಿಂಗ್ ಫೂಲ್ಗಳನ್ನು ತೆರೆಯಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ, ಕೇಂದ್ರ ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಕೇಂದ್ರ ಹೊಸ ಮಾರ್ಗಸೂಚಿಯಲ್ಲಿ ಅನುಮತಿ ಕೊಟ್ಟರೆ ನಮ್ಮ ರಾಜ್ಯ ಅವುಗಳನ್ನು ತೆರೆಯಲು ಸಿದ್ಧವಿದೆ ಎಂದರು.
ಇಂದು ಪ್ರವಾಸೋದ್ಯಮ ಇಲಾಖೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಯಿತು. ಇಲಾಖೆಗಳಿಗೆ ಅಗತ್ಯವಿರುವ ಅನುದಾನದ ಬಗ್ಗೆ ಚರ್ಚಿಸಲಾಯಿತು. ಈ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಅದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು ಎಂದರು.
ಕ್ರೀಡಾಪಟುಗಳಿಗೆ ಘೋಷಿಸಲಾಗಿರುವ ಪ್ರೋತ್ಸಾಹಧನ ನೀಡಲು ಸಾಧ್ಯವಾಗಿಲ್ಲ. ಅದಕ್ಕೆ ಬೇಕಾದ ಹಣ ಬಿಡುಗಡೆ ಮಾಡುವಂತೆ ಸಿಎಂ ಸೂಚಿಸಿದ್ದಾರೆ. ಪ್ರಸ್ತುತ ಇಲಾಖಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ಹೇಳಿದ್ದಾರೆ ಎಂದರು.
ಈ ಹಿಂದೆ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ಒಂದೇ ಸಚಿವಾಲಯದ ಅಡಿ ಬರುತ್ತಿದ್ದವು. ಹಾಗಾಗಿ ಮತ್ತೆ ಅದೇ ರೀತಿ ಇಲಾಖೆಗಳನ್ನು ವಿಲೀನಗೊಳಿಸುವಂತೆ ಮತ್ತೊಮ್ಮೆ ಪ್ರಸ್ತಾಪ ಮಾಡಿದ್ದೇನೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
79ಎ ಮತ್ತು 79ಬಿ ವಿಚಾರ ಒಂದು ಚರ್ಚೆಯ ವಿಷಯ. ಕೆ ಸಿ ಕೊಂಡಯ್ಯ ಸೇರಿ ಕೆಲವು ಕಾಂಗ್ರೆಸ್‌ನವರೂ ಇದನ್ನು ಸ್ವಾಗತಿಸಿದ್ದಾರೆ. ಈ ಹಿಂದೆಯೂ ಕೂಡ ಕೃಷಿಭೂಮಿಯನ್ನು ಖರೀದಿಸುತ್ತಿದ್ದರು. ನೀರಾವರಿ ಭೂಮಿಯನ್ನು ರೈತರ ಹೆಸರಿನಲ್ಲಿ ಖರೀದಿಸಿ ಆನಂತರ ಪರಿವರ್ತನೆ ಮಾಡಿ, ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಮಧ್ಯವರ್ತಿಗಳಿಗೆ ಲಾಭವಾಗುತ್ತಿತ್ತು. ಈಗ ಅದು ತಪ್ಪಿದೆ ಎನ್ನುವ ಮೂಲಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸಮರ್ಥಿಸಿದರು.
ಈ ಹಿಂದೆ ಇದ್ದ ಕಾನೂನು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿತ್ತು. ತಹಶೀಲ್ದಾರ್, ಉಪವಿಭಾಗಾಧಿಕಾರಿಯಾಗಿ ಬರಲು ಪೈಪೋಟಿ ನಡೆಸುತ್ತಿದ್ದರು. ಯಾಕೆಂದರೆ, 79ಎ ಮತ್ತು 79ಬಿ ಕಲಂ ಕೂಡ ಅವರಿಗೆ ಒಂದು ಆದಾಯದ ಮೂಲವಾಗಿತ್ತು. ಈಗ ಕೆಲವರ ವೈಯಕ್ತಿಕ ಲಾಭದ ಮೂಲವನ್ನೇ ಸರ್ಕಾರ ಈಗ ಕಾನೂನು ತಿದ್ದುಪಡಿಯಿಂದ ಕಟ್ ಮಾಡಿದೆ. ಈಗ ರೈತರು ಮತ್ತು ಖರೀದಿದಾರರ ನಡುವೆ ವ್ಯವಹಾರ ನಡೆಯುತ್ತದೆ. ಇದರಿಂದ ರೈತರಿಗೆ ಹೆಚ್ಚಿನ ಲಾಭ ಸಿಗುತ್ತದೆ ಎಂದರು.
ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಹುಟ್ಟೂರು ವೀರಪುರ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರು ಬಾನಂದೂರು ಅಭಿವೃದ್ಧಿಗೆ ಡಿಪಿಆರ್ ಸಿದ್ಧವಾಗಿದೆ. ಸಂಪುಟದ ಮುಂದೆ ಡಿಪಿಆರ್ ಮಂಡಿಸಲಾಗುತ್ತದೆ. ಅದಕ್ಕೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.