ಉಡುಪಿ: ನಾಡಿನ ಪ್ರಸಿದ್ಧ ಧಾರ್ಮಿಕ ಆಚರಣೆಗಳೊಂದಾದ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸುಮಾರು 800ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ಈ ಪರ್ಯಾಯೋತ್ಸವದ ಸಂದರ್ಭದಲ್ಲಿ ಶ್ರೀ ಕೃಷ್ಣಮಠದ ಆಡಳಿತ ಮತ್ತು ಕೃಷ್ಣನ ಪೂಜೆಯ ಅಧಿಕಾರ ಒಂದು ಮಠದಿಂದ ಇನ್ನೊಂದು ಮಠಕ್ಕೆ ಸರದಿಪ್ರಕಾರ ಹಸ್ತಾಂತರವಾಗುತ್ತದೆ. ಅದರಂತೆ ಮುಂದಿನ 2026 ಜನವರಿ 18ರಂದು ಶಿರೂರು ಮಠದ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥರು, ಈಗಿನ ಪರ್ಯಾಯ ಪೀಠಾಧೀಶರಾಗಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಪೂಜಾಧಿಕಾರ ಪಡೆಯಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ 4 ಮುಹೂರ್ತಗಳು ನಡೆಯಲಿವೆ.
4 ಮುಹೂರ್ತಗಳು ಯಾವುದು? ಆಚರಣೆ ಹೇಗೆ?: ಸಂಪ್ರದಾಯದಂತೆ ಮೊದಲನೆಯದಾಗಿ ಬಾಳೆ ಮುಹೂರ್ತ, ನಂತರ ಕ್ರಮವಾಗಿ ಕಟ್ಟಿಗೆ ಮುಹೂರ್ತ, ಧಾನ್ಯ ಮುಹೂರ್ತ, ಅಕ್ಕಿ ಮುಹೂರ್ತಗಳು ನಡೆಯುತ್ತವೆ. ಅದರಂತೆ ಮೊದಲ ಮುಹೂರ್ತ ಬಾಳೆ ಮುಹೂರ್ತ ಡಿಸೆಂಬರ್ 6 ರಂದು ಸಂಪನ್ನಗೊಳ್ಳಲಿದೆ.
ಈ ಸಂದರ್ಭದಲ್ಲಿ ಮಠದ ರಥಬೀದಿಯಲ್ಲಿ ಬಾಳೆಗಿಡ, ತುಳಸಿಗಿಡ ಹಾಗೂ ಕಬ್ಬಿನ ಗಿಡಗಳನ್ನು ಮೆರವಣಿಗೆಯ ಮೂಲಕ ತಂದು ಶಿರೂರು ಮಠದ ಜಮೀನಿನಲ್ಲಿ ನೆಡುವ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತದೆ. ಕಟ್ಟಿಗೆ ಮುಹೂರ್ತದಲ್ಲಿ ಮನೆಗಳಿಂದ ಭಕ್ತರು ನೀಡುವ ಕಟ್ಟಿಗೆಗಳನ್ನು ರಥಬೀದಿಯಲ್ಲಿ ಭವ್ಯ ಮೆರವಣಿಗೆ ಮಾಡಿ, ಮಧ್ವಸರೋವರದ ಸಮೀಪ ರಥದ ರೂಪದಲ್ಲಿ ಅವುಗಳನ್ನು ಸಂಗ್ರಹಿಸಲಾಗುತ್ತದೆ. ಪರ್ಯಾಯೋತ್ಸವಕ್ಕೆ ಕೆಲವು ದಿನಗಳ ಮೊದಲು ಧಾನ್ಯ ಹಾಗೂ ಅಕ್ಕಿ ಮುಹೂರ್ತ ನಡೆಸಲಾಗುತ್ತದೆ. ಇದರಲ್ಲಿ ಧಾನ್ಯ ಮತ್ತು ಅಕ್ಕಿ ಮುಡಿಗಳನ್ನು ಭವ್ಯ ಮೆರವಣಿಗೆ ಶ್ರೀ ಕೃಷ್ಣನ ಮಠದಲ್ಲಿ ತಂದಿರಿಸಿ ಬಳಿಕ ಪೂಜೆ ಸಲ್ಲಿಕೆಯಾಗುತ್ತದೆ.
ಈ ಮುಹೂರ್ತಗಳ ಉದ್ದೇಶ: ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮ ಎಂದು ಕರೆಯುತ್ತಾರೆ. ಇಲ್ಲಿ ದಿನವೂ ನಡೆಯುವ ಅನ್ನ ದಾಸೋಹಕ್ಕೆ ವಿಶೇಷ ಮಹತ್ವವಿದೆ. ಅನ್ನ ದಾಸೋಹಕ್ಕೆ ಅಗತ್ಯವಾದ ಪರಿಕರಗಳನ್ನು ಸಂಗ್ರಹಿಸುವುದೇ ಈ ಮುಹೂರ್ತಗಳ ಉದ್ದೇಶ. ಪರ್ಯಾಯ ಮಠದ ಮುಂದಿನ 2 ವರ್ಷಗಳ ಕಾಲ ಕೃಷ್ಣ ಭಕ್ತರಿಗೆ ಕೃಷ್ಣನ ಪ್ರಸಾದದ ರೂಪದಲ್ಲಿ ಬಡಿಸುವ ಊಟಕ್ಕೆ ಅಗತ್ಯವಾದ ಬಾಳೆಎಲೆಗಾಗಿ ಬಾಳೆಯ ಗಿಡಗಳನ್ನು ನೆಡಲಾಗುತ್ತದೆ. ಅದೇ ರೀತಿ ಅನ್ನಪ್ರಸಾದ ತಯಾರಿಕೆಗೆ ಕಟ್ಟಿಗೆ, ದಾನ್ಯ ಮತ್ತು ಅಕ್ಕಿಯನ್ನು ಸಂಗ್ರಹಿಸಲಾಗುತ್ತದೆ.
ಡಿ.6ರಂದು ಬೆಳಗ್ಗೆ 7 ಗಂಟೆಗೆ ಬಾಳೆ ಮುಹೂರ್ತ ನಡೆಯಲಿದೆ. ಮುಂದೆ ಪರ್ಯಾಯ ಪೀಠಾರೋಹಣ ಮಾಡಲಿರುವ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥರು ಬಾಳೆ ಮುಹೂರ್ತದಲ್ಲಿ ಭಾಗವಹಿಸಲಿದ್ದಾರೆ. ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರ ತೀರ್ಥರ ನಂತರ ಅವರ ಉತ್ತರಾಧಿಕಾರಿಯಾಗಿ ಶ್ರೀ ವೇದವರ್ಧನ ತೀರ್ಥರು ಶಿರೂರು ಪೀಠವನ್ನೇರಿದ್ದು, ತಮ್ಮ ಮೊದಲ ಪರ್ಯಾಯ ಮಹೋತ್ಸವವನ್ನು 2026 ಜನವರಿ 18 ರಂದು ನಡೆಸಲಿದ್ದಾರೆ. ಮುಂದೆ 2028ರ ಜ.18ರವರೆಗೆ ಅವರು ಕೃಷ್ಣಮಠದ ಆಡಳಿತ, ಕೃಷ್ಣನ ಪೂಜೆ, ಅನ್ನದಾಸೋಹ ಮತ್ತು ವೈವಿಧ್ಯಮಯ ಧಾರ್ಮಿಕ - ಸಾಂಸ್ಕೃತಿಕ - ಸಾಮಾಜಿಕ ಕಾರ್ಯಗಳನ್ನು ನಡೆಸಲಿದ್ದಾರೆ.
ಈ ಬಗ್ಗೆ ಈ ಟಿವಿ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಉಪನ್ಯಾಸಕ ಅಶ್ವಥ್ ಭಾರಧ್ವಾಜ್ "ಬಾಳೆ ದೇವರ ಪೂಜೆಯ ಆರಾಧನೆಗೆ ಮಹತ್ವವನ್ನು ಪಡೆದುಕೊಂಡಿದೆ. ಮುಂದೆ ಬರುವ ಪರ್ಯಾಯ ಮಹೋತ್ಸವದಲ್ಲಿ ಮುಂದಿನ 2 ವರ್ಷಗಳ ಕಾಲ ಕೃಷ್ಣಭಕ್ತರಿಗೆ ಕೃಷ್ಣನ ಪ್ರಸಾದದ ರೂಪದಲ್ಲಿ ಬಡಿಸುವ ಊಟಕ್ಕೆ ಅಗತ್ಯವಾದ ಬಾಳೆ ಎಲೆಗಾಗಿ ಬಾಳೆಯ ಗಿಡಗಳನ್ನು ನೆಡಲಾಗುತ್ತದೆ. ಬಾಳೆ ಗಿಡದಲ್ಲಿ ಆತ್ಯಂತ ಆಯುರ್ವೇದ ಗುಣಗಳು ಸಹ ಇದೆ" ಎಂದು ತಿಳಿಸಿದರು.
ಇದನ್ನೂ ಓದಿ: ಉಡುಪಿ: 53 ದಿನಗಳಲ್ಲಿ 20 ರಾಜ್ಯ ಪ್ರವಾಸ ಮಾಡಿದ ಯುವಕರು, ಕರಾವಳಿ ಧಾರ್ಮಿಕ ಮಹತ್ವದ ಕುರಿತು ಪ್ರಚಾರ