ಬೆಂಗಳೂರು: ನಾಯಕತ್ವದಿಂದ ಬಿ ಎಸ್ ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗು ಧಾರವಾಡ ಶಾಸಕ ಅರವಿಂದ ಬೆಲ್ಲದ್ ಹೆಸರು ಮುಂಚೂಣಿಗೆ ಬಂದಿವೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೆಸರನ್ನು ಸಂಘ ಪರಿವಾರ ಸೂಚಿಸಿದ್ದು, ವರಿಷ್ಠರು ಈ ಹೆಸರಿಗೆ ಗ್ರೀನ್ ಸಿಗ್ನಲ್ ನೀಡುವ ಲಕ್ಷಣಗಳು ದಟ್ಟವಾಗಿವೆ. ಪಕ್ಷವನ್ನು ಬಹು ನಾಯಕತ್ವದಡಿ ಮುಂದುವರಿಸದಿದ್ದರೆ, ಕಷ್ಟ ಎಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ವರಿಷ್ಠರು, ಪಕ್ಷವನ್ನು ಸರ್ವ ಜಾತಿಗಳ ಹಬ್ ಅನ್ನಾಗಿ ರೂಪಿಸುವುದು ಅನಿವಾರ್ಯ ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ.
ಒಂದು ಸಮುದಾಯವನ್ನು ಪ್ರಮುಖವಾಗಿ ಪರಿಗಣಿಸಿದರೆ ನಿರ್ಣಾಯಕ ಹಂತದಲ್ಲಿ ಮುಜುಗರ ಅನುಭವಿಸುವ ಸ್ಥಿತಿ ಬರುತ್ತದೆ. ಹೀಗಾಗಿ ಪಕ್ಷ ಆಲ್ ಕಮ್ಯುನಿಟಿ ಹಬ್ ಆಗುವುದು ಸೂಕ್ತ ಮತ್ತು ಅನಿವಾರ್ಯ ಎಂದು ವರಿಷ್ಠರು ಭಾವಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ಸಿ.ಟಿ. ರವಿ ಹೆಸರು ಸಿಎಂ ಹುದ್ದೆಯ ರೇಸ್ನಲ್ಲಿ ಮುಂಚೂಣಿಗೆ ಬಂದು ನಿಂತಿದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದಾಗ, ಆ ಸಮುದಾಯದಿಂದ ಎದುರಾಗುವ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿರುವ ವರಿಷ್ಠರು, ಪಂಚಮಸಾಲಿ ಸಮುದಾಯದ ಅರವಿಂದ್ ಬೆಲ್ಲದ್ ಅವರಿಗೆ ಸ್ಥಾನ ಕಲ್ಪಿಸಲು ಚಿಂತನೆ ನಡೆದಿದೆ. ಇದರಿಂದ ಲಿಂಗಾಯತ ಸಮುದಾಯದ ಅಸಮಾಧಾನವನ್ನು ಶಮನ ಮಾಡಿದಂತಾಗುತ್ತದೆ ಎಂಬುದು ದೆಹಲಿ ನಾಯಕರ ಲೆಕ್ಕಾಚಾರ ಎನ್ನಲಾಗ್ತಿದೆ.
ಈ ಮಧ್ಯೆ ಲಿಂಗಾಯತ ಸಮುದಾಯದ ಮುರುಗೇಶ್ ನಿರಾಣಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಮುಂದಿನ ಸರ್ಕಾರ ರಚನೆಯ ಸಂದರ್ಭದಲ್ಲಿ ಹಾಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಕೊಕ್ ನೀಡಲಿದ್ದು, ಬಿ.ಶ್ರೀರಾಮುಲು ಹಾಗೂ ಬಸವರಾಜ ಬೊಮ್ಮಾಯಿ ಉಪಮುಖ್ಯಮಂತ್ರಿಗಳಾಗಿ ಸೇರ್ಪಡೆಯಾಗಲಿದ್ದಾರೆ. ಅಲ್ಲಿಗೆ ಅಶ್ವತ್ಥ್ ನಾರಾಯಣ, ಲಕ್ಷ್ಮಣ್ ಸವದಿ, ಬಿ.ಶ್ರೀರಾಮುಲು ಮತ್ತು ಬಸವರಾಜ ಬೊಮ್ಮಾಯಿ ಡಿಸಿಎಂ ಹುದ್ದೆಗಳಲ್ಲಿರಲಿದ್ದಾರೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಲಿಂಗಾಯತ ಒಳಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ವರಿಷ್ಠರ ಯೋಚನೆ ಎಂದು ಮೂಲಗಳು ಹೇಳಿವೆ. ಹಾಲಿ ಸಚಿವ ಸಂಪುಟದ ಅರ್ಧ ಡಜನ್ಗೂ ಹೆಚ್ಚು ಸಚಿವರಿಗೆ ಕೊಕ್ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸಂಪುಟ ಸಭೆ ಬೆನ್ನಲ್ಲೇ ವಲಸೆ ಶಾಸಕರು - ಸಿಎಂ ಯಡಿಯೂರಪ್ಪ ಪ್ರತ್ಯೇಕ ಸಭೆ!