ಬೆಂಗಳೂರು: ನಾವು 3 ಕೋಟಿ ಲಸಿಕೆ ಆರ್ಡರ್ ಮಾಡಿದ್ದೇವೆ. ಅದರಲ್ಲಿ ನಮಗೆ 1 ಕೋಟಿ ಲಸಿಕೆ ಬಂದಿದೆ. 2ನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 86 ಲಕ್ಷ ಜನರಿಗೆ ಮೊದಲ ಡೋಸ್ ನೀಡಿದ್ದೇವೆ. ಇದರಲ್ಲಿ 25 ಲಕ್ಷ ಜನಕ್ಕೆ ಎರಡನೇ ಡೋಸ್ ನೀಡಿದ್ದೇವೆ. ಇನ್ನೂ 60 ಲಕ್ಷ ಜನರಿಗೆ 2ನೇ ಡೋಸ್ ಕೊಡಬೇಕು ಎಂದರು.
2ನೇ ಡೋಸ್ ಕಡಿಮೆ ಆಗುತ್ತಿರುವುದರ ಬಗ್ಗೆ ಕೇಂದ್ರದ ಗಮನಕ್ಕೆ ತಂದಿದ್ದೇವೆ. ಸಕಾಲದಲ್ಲಿ ಲಸಿಕೆ ಸಿಗದಿದ್ದರೆ ಏನು ಮಾಡುವುದು. ಅವರ ಪರಿಸ್ಥಿತಿ ಏನು..? ಪರಿಹಾರ ಏನು..? ಎಂದು ಕೇಳಿದ್ದೇವೆ. ಕೇಂದ್ರ ಸರ್ಕಾರ ಏನು ಹೇಳುತ್ತದೆಯೋ ಕಾದು ನೋಡಬೇಕು ಎಂದರು.
2 ಹಂತದಲ್ಲಿ ಲಸಿಕೆ ಹಾಕುತ್ತಿದ್ದೇವೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಉಚಿತವಾಗಿ ಲಸಿಕೆ ಕೊಡಲಾಗುತ್ತಿದೆ. 18-45 ವರ್ಷ ಒಳಗಿನವರಿಗೆ ರಾಜ್ಯ ಸರ್ಕಾರವೇ ಖರೀದಿಸಿ ನೀಡಬೇಕು. ಲಸಿಕೆ ಯಾವಾಗ ಬರುತ್ತದೆ ಎಂಬುದು ಹೇಳುವುದಕ್ಕೆ ಆಗುವುದಿಲ್ಲ. ನಾವು ಆರ್ಡರ್ ಮಾಡಿದ್ದೇವೆ. ಉತ್ಪಾದಿಸುವವರು ನಮಗೆ ಕೊಡಬೇಕು. ನಾವು ಕಾಯುತ್ತಿದ್ದೇವೆ ಎಂದರು.
4 ತಿಂಗಳಲ್ಲಿ 1 ಕೋಟಿ ಡೋಸ್ ಬಂದಿದೆ. ಆರೂವರೆ ಕೋಟಿ ಡೋಸ್ ಬೇಕು. ಎಲ್ಲರಿಗೂ 2 ಡೋಸ್ ಹಾಕಬೇಕು. ಇದು ಯಾವಾಗ ಬರುತ್ತದೆ ಎಂಬುದು ನಾನಂತು ಹೇಳುವುದಕ್ಕೆ ಆಗಲ್ಲ. ಇದು ಉತ್ಪಾದನೆ ಮೇಲೆ ಅವಲಂಬಿತವಾಗಿದೆ. ಎಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.