ಬೆಂಗಳೂರು: ಮಗಳು ಸುಖವಾಗಿ ಬದುಕಲೆಂದು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ ತಂದೆ-ತಾಯಿ ಇಂದು ಮಗಳ ಪರಿಸ್ಥಿತಿ ಕಂಡು ಮರುಗುವಂತಾಗಿದೆ. ಈ ನರರಾಕ್ಷಸನ ಕೃತ್ಯಕ್ಕೆ ಮಾನವೀಯ ಸಮಾಜ ತಲೆತಗ್ಗಿಸುವಂತಾಗಿದೆ.
ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಸಿ.ಪಾಳ್ಯದ ಬಳಿ ವಾಸವಿರುವ ಸೂರಜ್ ಸಿಂಗ್ ಕಳೆದೊಂದು ವರ್ಷದ ಹಿಂದೆ ಯುವತಿಯೋರ್ವಳನ್ನು ವರಿಸಿದ್ದ. ಮದುವೆ ಆದಾಗಿನಿಂದಲೂ ಸಹ ವರದಕ್ಷಿಣೆಗಾಗಿ ಪೀಡಿಸುತ್ತಿದ್ದನಂತೆ. ಆದರೆ ಯುವತಿಯ ತಂದೆ-ತಾಯಿ 15 ಲಕ್ಷ ರೂಪಾಯಿ ಖರ್ಚು ಮಾಡಿ ವಿವಾಹ ಮಾಡಿದ್ದರು. ಆದರೂ ಪದೇ ಪದೆ ಹಣಕ್ಕಾಗಿ ಪೀಡಿಸುತ್ತಿದ್ದನಂತೆ.
ಪತಿ ಸೂರಜ್ ಸಿಂಗ್ ನಿನ್ನೆ ಮನೆಯಲ್ಲಿ ಸೈಟ್ ಕೊಡಿಸುವಂತೆ ಕೇಳಿದ್ದಾನಂತೆ. ಆಗಲ್ಲ ಎಂದಿದ್ದಕ್ಕೆ ಗಲಾಟೆ ಮಾಡಿದ್ದು, ಜಗಳ ತಾರಕಕ್ಕೇರಿ ಪತಿ ಹಾಗೂ ಅತ್ತೆ-ಮಾವ ಮೂವರು ಪತ್ನಿಗೆ ಪೆಟ್ರೋಲ್ ಸುರಿದು ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ್ದಾರೆಂದು ತಿಳಿದುಬಂದಿದೆ.
ಸದ್ಯ ಸುಟ್ಟ ಗಾಯಗಳಿಂದಾಗಿ ಯುವತಿಯು ಜೀವನ್ಮರಣ ಹೋರಾಟವನ್ನು ನಡೆಸುತ್ತಿದ್ದಾರೆ. ಈ ಸಂಬಂಧ ರಾಮಮೂರ್ತಿನಗರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.